alex Certify
ಕನ್ನಡ ದುನಿಯಾ       Mobile App
       

Kannada Duniya

ಈಶ್ವರಪ್ಪರ ಗೆಲುವು ಖಚಿತವೆಂದ ಯಡಿಯೂರಪ್ಪ

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ 25 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪ್ರೆಸ್ ಟ್ರಸ್ಟ್ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಸಲ್ಲದ ಸುದ್ದಿ ಹಬ್ಬಿಸುವವರು, ಶಕುನಿ ಕೆಲಸ ಮಾಡುವವರು ಎಲ್ಲ ಕಾಲದಲ್ಲೂ ಇರುತ್ತಾರೆ. ಅದಕ್ಕೆ ಪ್ರಾಶಸ್ತ್ಯ ನೀಡಬೇಕಾದ ಅಗತ್ಯವಿಲ್ಲ. ಕೆ.ಎಸ್. ಈಶ್ವರಪ್ಪ ಗೆಲುವಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಸೇರಿದಂತೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಈಶ್ವರಪ್ಪರ ಗೆಲುವು ಖಚಿತ ಎಂದರಲ್ಲದೇ  ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ವಿಧಾನಪರಿಷತ್ ಗೆ ಮೊದಲ ವ್ಯಕ್ತಿಯಾಗಿ ಎಸ್. ರುದ್ರೇಗೌಡ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಈ ಮೂವರು ಒಟ್ಟಾಗಿ ಓಡಾಡಲು ಸಾಧ್ಯವಾಗದೇ ಉಸಿರುಗಟ್ಟುವ ಪರಿಸ್ಥಿತಿ ಕಾಂಗ್ರೆಸ್ ನಲ್ಲಿದೆ. ಇದು ಬಿಜೆಪಿಗೂ ಹಾಗೂ ಕಾಂಗ್ರೆಸ್ ಗೂ ಇರುವ ವ್ಯತ್ಯಾಸ ಎಂದು ಛೇಡಿಸಿದರು.

ಬಿಜೆಪಿ 150 ಸ್ಥಾನ ಗೆಲುವು ಸಾಧಿಸುವುದು ಖಚಿತ. ಕಾಂಗ್ರೆಸ್ 50 ರಿಂದ 60 ಸ್ಥಾನ ದಾಟುವುದಿಲ್ಲ. ಮೈಸೂರು ಭಾಗದಲ್ಲೂ ಬಹುತೇಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಾತಾವರಣ ಇದೆ ಎಂದರು.

ಬಳ್ಳಾರಿಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಎದುರು ಗೆಲುವು ಸಾಧಿಸುವುದು ಶ್ರೀರಾಮುಲು ಅವರಿಂದ ಮಾತ್ರ ಸಾಧ್ಯ. ಹೀಗಾಗಿ ಅವರನ್ನೇ ಕಣಕ್ಕಿಳಿಸಲಾಗಿದೆ. ಜನಾರ್ಧನ ರೆಡ್ಡಿ ಚುನಾವಣೆಗೆ ಸ್ಪರ್ಧಿಸುವ ಅಪೇಕ್ಷೆಯನ್ನೇನು ಹೊಂದಿರಲಿಲ್ಲ. ಎರಡು-ಮೂರು ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಜನಾರ್ಧನ ರೆಡ್ಡಿಯವರ ಸಹಕಾರ ಪಡೆಯಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಗೌರವದ ಮಾತುಗಳನ್ನು ಆಡಿದ್ದಾರೆ. ಯಾವುದೇ ಪಕ್ಷದೊಂದಿಗೆ ಬಿಜೆಪಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಸ್ಪಷ್ಟ ಬಹುಮತ ಬಿಜೆಪಿಗೆ ದೊರಕಲಿದೆ ಎಂದರು.

ಮೈಸೂರು ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಚುನಾವಣೆ ಪೂರ್ಣಗೊಳ್ಳುವವರೆಗೂ ಆ ಎರಡೂ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಹೀಗಿರುವಾಗ ಅವರ ವಿರುದ್ದ ಕೇಳಿಬರುತ್ತಿರುವ ಮಾತು ಕೇವಲ ಊಹಾಪೋಹವಷ್ಟೆ ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...