alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಮ್ಮೆ ದುರಂತ ನಾಯಕರಾಗ್ತಾರಾ ಯಡಿಯೂರಪ್ಪ?

ರಾಜ್ಯ ರಾಜಕಾರಣ ಸುಪ್ರೀಂ ಕೋರ್ಟ್ ತೀರ್ಪಿನಿಂದ ಈಗ ಮಹತ್ತರ ತಿರುವು ಪಡೆದಿದೆ. ನಾಳೆ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಇದರಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ಥಾನ ಡೋಲಾಯಮಾನವಾಗಿದೆ.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಸಿಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ಗೆ ಬೇಷರತ್ ಬೆಂಬಲ ಘೋಷಿಸಿದ್ದು, ಉಭಯ ಪಕ್ಷಗಳ ಶಾಸಕರನ್ನು ಬಿಜೆಪಿ ಸೆಳೆಯಬಾರದೆಂಬ ಕಾರಣಕ್ಕೆ ಹೈದ್ರಾಬಾದ್ ನ ಹೋಟೆಲ್ ನಲ್ಲಿ ಇರಿಸಿಕೊಂಡಿದೆ. ಈ ಶಾಸಕರುಗಳನ್ನು ಸಂಪರ್ಕಿಸಲು ಬಿಜೆಪಿ ನಾಯಕರು ಯತ್ನ ನಡೆಸಿದ್ದರೂ ಅದು ಸಾಧ್ಯವಾಗುತ್ತಿಲ್ಲವೆನ್ನಲಾಗಿದ್ದು, ಹೀಗಾಗಿ ಯಡಿಯೂರಪ್ಪನವರು ನಾಳೆ ಬಹುಮತವನ್ನು ಹೇಗೆ ಸಾಬೀತುಪಡಿಸಲಿದ್ದಾರೆಂಬುದು ಕುತೂಹಲಕ್ಕೆಡೆ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸದಿದ್ದರೂ ಅತ್ಯಧಿಕ ಸ್ಥಾನ ಹೊಂದಿರುವ ಹಿನ್ನಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪರನ್ನು ಸರ್ಕಾರ ರಚನೆಗೆ ರಾಜ್ಯಪಾಲ ವಜೂಭಾಯ್ ವಾಲಾ ಆಹ್ವಾನಿಸಿದ್ದು, ಗುರುವಾರದಂದು ನೂತನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರಿಗೆ ಪ್ರಮಾಣವಚನ ಬೋಧಿಸಿದ್ದರು. ಅಲ್ಲದೇ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು.

ಆದರೆ ಇದೀಗ ಸುಪ್ರೀಂ ಕೋರ್ಟ್ ಶನಿವಾರ ಸಂಜೆ 4 ಗಂಟೆಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದಷ್ಟೇ ಏರಿದ್ದ ಮುಖ್ಯಮಂತ್ರಿ ಸ್ಥಾನವನ್ನು ಯಡಿಯೂರಪ್ಪನವರು ಮತ್ತೊಮ್ಮೆ ಅಲ್ಪ ಅವಧಿಯಲ್ಲಿಯೇ ಕಳೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಈ ಹಿಂದೆ 2007 ರ ನವೆಂಬರ್ 12 ರಂದು ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಬಹುಮತ ಸಾಬೀತುಪಡಿಸಲಾಗದ ಕಾರಣ ಕೇವಲ 7 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...