alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ-ಜೆಡಿಎಸ್ ಅಧಿಕಾರದ ಕನಸು ನನಸಾಗುವುದಿಲ್ಲ: ಸಿದ್ದರಾಮಯ್ಯ

ಶಿವಮೊಗ್ಗ : ಜೆಡಿಎಸ್ ಹಾಗೂ ಬಿಜೆಪಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು ನಗರದ ಗೋಪಿ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ಧೇಶಿ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ ಅಧಿಕಾರದ ಕನಸು ಕಾಣುತ್ತಿವೆ. ಅವರ ಅಪ್ಪನಾಣೆ ಈ ಎರಡೂ ಪಕ್ಷಗಳು ಅಧಿಕಾರಕ್ಕೇರಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ವಿರೋಧಿ ಅಲೆ ಕಂಡುಬರುತ್ತಿದೆ. ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬರುವುದಿಲ್ಲ. ಜನ ನಮ್ಮ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.

ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಪಕ್ಷವಲ್ಲ. 25 ಶಾಸಕರು ಆಯ್ಕೆಯಾದರೆ ಅದೇ ಅವರ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದರಲ್ಲದೇ, ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ. ಏನಾದರೂ ಜೆಡಿಎಸ್ ಗೆ ಮತ ನೀಡಿದರೆ ಅದು ಕೋಮುವಾದಿ ಬಿಜೆಪಿಗೆ ಕೊಟ್ಟಂತಾಗುತ್ತದೆ. ಹೀಗಾಗಿ ಕೋಮುವಾದಿ ಬಿಜೆಪಿಯನ್ನು ಹಾಗೂ ಅವಕಾಶವಾದಿ ಜೆಡಿಎಸ್ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕು ಎಂದರು.

ಶಿವಮೊಗ್ಗದಲ್ಲಿ ಹಿಂದು ಮುಸಲ್ಮಾನರ ನಡುವೆ ಬೆಂಕಿ ಹಚ್ಚುವ ಕೆಲಸ ಬಿಟ್ಟು ಬೇರೆನನ್ನು ಬಿಜೆಪಿ ಮುಖಂಡರು ಮಾಡಲಿಲ್ಲ. ಕೇಂದ್ರ ನಾಯಕರಾದ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಕೂಡ ಇದೇ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.

ಭ್ರಷ್ಟಾಚಾರದ ಕುರಿತು ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಬಂದ ಬಿ.ಎಸ್.ಯಡಿಯೂರಪ್ಪರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಅಷ್ಟೆ ಅಲ್ಲದೇ ಕಳಂಕ ಹೊತ್ತಿರುವ ಯಡಿಯೂರಪ್ಪರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುತ್ತಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನಪರ ಆಡಳಿತ ನೀಡಿದೆ. ಮತ್ತೆ ಜನಾಶೀರ್ವಾದ ನಮಗೆ ಸಿಗುತ್ತದೆ ಎಂಬ ವಿಶ್ವಾಸವಿದೆ. ಪಕ್ಷ ಜನಪರ ಪ್ರಣಾಳಿಕೆಯನ್ನು ಸಿದ್ದಪಡಿಸಿದೆ. 1 ರಿಂದ 5 ಎಕರೆ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರರ ಖಾತೆಗೆ 5 ರಿಂದ 10 ಸಾವಿರ ರೂ. ನಗದು ನೀಡಲಾಗುವುದು. ಬಡ ಹೆಣ್ಣುಮಕ್ಕಳು ಪದವಿ ಪೂರೈಸುವವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಯೋಚನೆ ಇದೆ ಎಂದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...