alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಅತೃಪ್ತ ಶಾಸಕರ ಬೆನ್ನಿಗಿದ್ದಾರಾ ಮಾಜಿ ಸಿಎಂ ಸಿದ್ದರಾಮಯ್ಯ…?

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸ್ಥಾನ ವಂಚಿತರ ಅಸಮಾಧಾನ ಭುಗಿಲೆದ್ದಿದೆ. ಒಂದೆಡೆ ತಮ್ಮ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕುರಿತು ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಅವಕಾಶ ವಂಚಿತರು ಒಟ್ಟಾಗುತ್ತಿದ್ದು, ಸರ್ಕಾರದ ಮುಂದಿನ ಭವಿಷ್ಯವೇನು ಎಂಬ ಪ್ರಶ್ನೆಗೆ ಕಾರಣವಾಗಿದೆ.

ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಅತೃಪ್ತ ಶಾಸಕರೆಲ್ಲರೂ ಒಟ್ಟಾಗಿದ್ದು, ಇವರ ಸಂಖ್ಯೆ 10 ಕ್ಕೂ ಅಧಿಕ ಎಂಬುದು ಗಮನಾರ್ಹ. ಎಲ್ಲಕ್ಕಿಂತ ಮುಖ್ಯವಾಗಿ ಈ ಶಾಸಕರುಗಳ ಪೈಕಿ ಬಹುತೇಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದಾರೆ. ಹೀಗಾಗಿ ಸಚಿವ ಸ್ಥಾನ ವಂಚಿತ ಶಾಸಕರುಗಳ ಬೆನ್ನ ಹಿಂದೆ ಸಿದ್ದರಾಮಯ್ಯನವರಿದ್ದಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.

ಈ ಅನುಮಾನಗಳಿಗೆ ಪೂರಕವೆಂಬಂತೆ ಸಿದ್ದರಾಮಯ್ಯನವರು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬಾದಾಮಿ ಪ್ರವಾಸ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ಮಾಧ್ಯಮ ಪ್ರತಿನಿಧಿಗಳು ಉಪ ಮುಖ್ಯಮಂತ್ರಿ ಪರಮೇಶ್ವರ್ ಕುರಿತು ಕೇಳಿದ ಪ್ರಶ್ನೆಗೆ, ಅವರು ನನ್ನ ಪರಮಾಪ್ತರಲ್ಲಿ ಪರಮಾಪ್ತರು ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಬಿಕ್ಕಟ್ಟಿಗೂ ತಮ್ಮ ಪಕ್ಷಕ್ಕೂ ಸಂಬಂಧವಿಲ್ಲದಿದ್ದರೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಭಿನ್ನಮತೀಯ ನಾಯಕ ಎಂ.ಬಿ. ಪಾಟೀಲ್ ಅವರ ಸದಾಶಿವ ನಗರದ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಕಾರ್ಯ ನಡೆಸಿದ್ದಾರೆ.

ಮುಖ್ಯಮಂತ್ರಿಯವರ ಭೇಟಿ ಬಳಿಕ ಮಾತನಾಡಿರುವ ಎಂ.ಬಿ. ಪಾಟೀಲ್ ಅವರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಮನೆಗೆ ಬರುತ್ತೇನೆ ಎಂದಿದ್ದರು. ಹಾಗಾಗಿ ಭೇಟಿ ಮಾಡಿದ್ದೇನೆ. ನಾನು ಒಬ್ಬಂಟಿಯಲ್ಲ. ನನ್ನ ಹಿಂದೆ ಹತ್ತಾರು ಶಾಸಕರಿದ್ದಾರೆ. ಎಲ್ಲರೂ ಕುಳಿತು ಸಮಾಲೋಚನೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ಸಚಿವ ಸ್ಥಾನ ವಂಚಿತ ಶಾಸಕರ ಭಿನ್ನಮತದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೆರಳಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದು, ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...