alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಹಬ್ಬ ಅಲ್ಲಿನ್ನು ಕರಾಳ ನೆನಪು ಮಾತ್ರ….

IMG-20160908-WA0082

ಹಬ್ಬವೆಂದರೆ ಸಾಮಾನ್ಯವಾಗಿ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಅಂತೆಯೇ ಈ ಗ್ರಾಮದಲ್ಲಿಯೂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ ಜನ, ಗಣಪತಿ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ದುರಂತವೊಂದು ನಡೆದು ಹೋಗಿದೆ.

ಅಂದ ಹಾಗೇ ಈ ದುರಂತ ನಡೆದಿದ್ದು, ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿರುವ ತುಂಗಾ ಭದ್ರಾ ನದಿಯಲ್ಲಿ. ಗಣಪತಿ ವಿಸರ್ಜನೆಗೆ ಹೋದ ಯುವಕರು ಸ್ವಲ್ಪ ಎಚ್ಚರ ತಪ್ಪಿದ ಪರಿಣಾಮ ತಾವೇ ನೀರು ಪಾಲಾಗಿದ್ದಾರೆ. ಗ್ರಾಮದಲ್ಲಿ ಬೇರೆ, ಬೇರೆ ಜಾತಿ ಜನಾಂಗದವರಿದ್ದರೂ, ಅವರ ನಡುವೆ ಬಾಂಧವ್ಯ ಬೆಸೆದಿತ್ತು. ಗ್ರಾಮದ ಜನರೆಲ್ಲಾ ಒಟ್ಟಾಗಿ ಹಬ್ಬ ಆಚರಿಸುತ್ತಿದ್ದರು. ಬೇರೆಯಾಗಿ ಗಣಪತಿ ಕೂರಿಸಿದರೂ, ವಿಸರ್ಜನೆ ಮಾತ್ರ ಒಟ್ಟಿಗೆ ನಡೆಯುತ್ತಿತ್ತು.

ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣಪತಿಗಳನ್ನು ಒಟ್ಟಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ಗ್ರಾಮದ ಹೊರವಲಯದ ತುಂಗಾ ಭದ್ರಾ ನದಿಯಲ್ಲಿ ವಿಸರ್ಜನೆ ಮಾಡುತ್ತಿದ್ದರು. ಅಂತೆಯೇ ಈ ವರ್ಷವೂ ಗ್ರಾಮದ ಜನರೆಲ್ಲಾ ಒಟ್ಟುಗೂಡಿ ಅದ್ಧೂರಿಯಾಗಿ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಮಾಡಿದ್ದರು.

ಎಲ್ಲರೂ ನದಿಯ ದಂಡೆಗೆ ಹೋಗಿದ್ದು, ತೆಪ್ಪದಲ್ಲಿ ಗಣಪತಿ ಕೂರಿಸಿಕೊಂಡು ನದಿಯ ಮಧ್ಯಭಾಗಕ್ಕೆ ತೆರಳಿದ್ದಾರೆ. ಈ ವೇಳೆಗೆ ಅಲ್ಲಿ ಕಾದು ಕುಳಿತಿದ್ದ ಜವರಾಯ ಗಣಪತಿ ವಿಸರ್ಜನೆಗೆ ಬಂದವರನ್ನೇ ವಿಸರ್ಜನೆ ಆಗುವಂತೆ ಮಾಡಿದ್ದಾನೆ.

ಗಣಪತಿ ಬಿಡುವುದನ್ನು ದಡದಲ್ಲಿ ನೋಡುತ್ತಿದ್ದವರಿಗೆ ಆಘಾತ ಕಾದಿದೆ. ನೋಡ ನೋಡುತ್ತಿದ್ದಂತೆಯೇ ತೆಪ್ಪ ಮುಳುಗಿದೆ. ಈಜು ಬಂದ ಕೆಲವರು ದಡ ಸೇರಿದರೆ, ಈಜು ಬಾರದವರು ತಮ್ಮವರ ಕಣ್ಣೆದುರಲ್ಲೇ ನೀರಿನಲ್ಲಿ ಕಣ್ಮರೆಯಾಗಿದ್ದಾರೆ. ಅವರನ್ನು ರಕ್ಷಿಸಲು ಹೋದ ಒಂದಿಬ್ಬರು ಕೂಡ ಮುಳುಗಿದ್ದಾರೆ.

ಹೀಗೆ ಬರೋಬ್ಬರಿ 12 ಮಂದಿ ಜಲ ಸಮಾಧಿಯಾಗಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಲೇ, ಬಂಧು- ಬಾಂಧವರು ನದಿಯ ಬಳಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಜಿಲ್ಲಾಡಳಿತವೂ ತಕ್ಷಣಕ್ಕೆ ಸ್ಪಂದಿಸಿದೆ. ಜನಪ್ರತಿನಿಧಿಗಳು ಕೂಡ ಜವಾಬ್ದಾರಿ ತೋರಿದ್ದಾರೆ.

ಆಗ ನದಿಯಲ್ಲಿ ಮುಳುಗಿದವರನ್ನು ರಕ್ಷಿಸಲು ನೆನಪಾಗಿದ್ದೇ ಹರಿಹರದ ಸಾದಾತ್ ಖಾನ್. ಗಣಪತಿ ಹಬ್ಬ ಎಂದರೆ ಸಾಮಾನ್ಯವಾಗಿ ಗಲಾಟೆ, ಕೋಮು ಗಲಭೆ, ಶಾಂತಿ ಸಭೆ ಮೊದಲಾದ ಪದಗಳು ಮನದಲ್ಲಿ ಸುಳಿಯುತ್ತವೆ. ಆದರೆ, ಗಣಪತಿ ವಿಸರ್ಜನೆಗೆ ಹೋಗಿ ನದಿಯಲ್ಲಿ ಮುಳುಗಿದವರನ್ನು ಪತ್ತೆ ಹಚ್ಚಲು ಬಂದವರೇ ಸಾದಾತ್ ಖಾನ್.

ಹರಿಹರದ ತುಂಗಾ ಭದ್ರಾ ನದಿಯಲ್ಲಿ ಮಾತ್ರವಲ್ಲದೇ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರಿನಲ್ಲಿ ಮುಳುಗಿದವರನ್ನು ಪತ್ತೆ ಹಚ್ಚುವ ಸಾದಾತ್ ಖಾನ್ ತಂಡದ 13 ಮಂದಿ ಹಾಡೋನಹಳ್ಳಿಗೆ ತಕ್ಷಣವೇ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.

ನಿಮಗೊಂದು ವಿಷಯ ಹೇಳಲೇಬೇಕು. ಹಾಡೋನಹಳ್ಳಿಯ ಸಮೀಪದಲ್ಲಿ ಹರಿಯುವ ತುಂಗಾ ಭದ್ರಾ ನದಿಯಲ್ಲಿ ಮುಳುಗಿದ್ದವರು ದಡ ಸೇರುವ ಅವಕಾಶ ಇತ್ತು. ಆದರೆ, ಅಲ್ಲಿದ್ದ ಗುಂಡಿಗಳು ಹೊರ ಹೋಗಲು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಕ್ರಮ ಮರಳು ಗಣಿಗಾರಿಕೆಯಿಂದ ಅವೈಜ್ಞಾನಿಕವಾಗಿ ಮರಳು ತೆಗೆದಿರುವ ಕಾರಣ ನದಿಯಲ್ಲಿ ಬೃಹತ್ ಆಳ, ಅಗಲದ ಗುಂಡಿಗಳಾಗಿವೆ.

ಈ ಗುಂಡಿಯ ಮೇಲೆಯೇ ತೆಪ್ಪ ಮಗುಚಿದ್ದರಿಂದ ಹೆಚ್ಚಿನ ಸಾವು- ನೋವು ಉಂಟಾಗಿದೆ. ಹರಿಹರದಿಂದ ಬಂದ ಸಾದಾತ್ ಖಾನ್ ಮತ್ತು ತಂಡದವರು. ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ. ಅವರಿಗೆ ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಜಿಲ್ಲಾಡಳಿತ ಕೈ ಜೋಡಿಸಿದೆ.

ಸಾದಾತ್ ಖಾನ್ ತಂಡದ ಪ್ರಯತ್ನದಿಂದ ಶವಗಳನ್ನು ಹೊರ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಗ್ರಾಮದಲ್ಲಿ ಒಂದೇ ಕಡೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಕಂಡ ದೃಶ್ಯ ಎಂತಹವರ ಮನ ಕಲಕುವಂತಿತ್ತು.

ಗ್ರಾಮದಲ್ಲಿ ಒಟ್ಟಿಗೆ ಆಡಿ ಬೆಳೆದವರು ಒಟ್ಟಿಗೆ ಹೆಣವಾಗಿ ಮಲಗಿದ್ದನ್ನು ಕಂಡು ನೆರೆದವರ ಕಣ್ಣೀರ ಕಟ್ಟೆ ಒಡೆದಿತ್ತು. ಯಾರನ್ನೂ ಯಾರೂ ಸಮಾಧಾನ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇದರೊಂದಿಗೆ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆದಿದ್ದವು. ಅಲ್ಲಿದ್ದವರ ಕಣ್ಣಾಲಿಗಳೆಲ್ಲಾ ಒದ್ದೆಯಾಗಿದ್ದವು.

ನದಿಯಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ಮುಗಿಸಿದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ಇನ್ನು ಗಣಪತಿ ಹಬ್ಬ ಎಂದರೆ ಕರಾಳ ನೆನಪು ಮಾತ್ರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...