alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ವಿಸರ್ಜನಾಪೂರ್ವ ಮೆರವಣಿಗೆಗೆ ಬಿಗಿ ಬಂದೋಬಸ್ತ್

ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಸೆ.5 ರಂದು ನಡೆಯಲಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ತಿಳಿಸಿದರು.

ಅವರಿಂದು ಪ್ರೆಸ್ ಕ್ಲಬ್ ಭವನದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಗೋಪಾಳದ ಶ್ರೀರಾಮ್ ನಗರ ಹಾಗೂ ಸೀಗೆಹಟ್ಟಿ ಬಡಾವಣೆಯಲ್ಲಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಸಂದರ್ಭದಲ್ಲಿ ಸಣ್ಣ ಅಹಿತಕರ ಘಟನೆ ನಡೆದಿತ್ತು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. 12 ಗಂಟೆಯೊಳಗೆ ಘಟನೆಗೆ ಕಾರಣಕರ್ತರಾದ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇಲ್ಲಸಲ್ಲದ ಗಾಳಿ ಸುದ್ದಿ ಹರಡುತ್ತಿದ್ಧಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು. ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು. ಇಲ್ಲಸಲ್ಲದ ಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮೂರು ತಿಂಗಳ ಹಿಂದಿನಿಂದಲೇ ಬಂದೋಬಸ್ತ್ ಕುರಿತು ಸಿದ್ದತೆ ಕೈಗೊಂಡಿದೆ. ಶಾಂತಿ ಸುವ್ಯವಸ್ಥೆಗೆ ಒತ್ತು ನೀಡಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ಈಗಾಗಲೇ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದರು.

ಪೊಲೀಸ್ ಇಲಾಖೆ ಎಂತಹುದೇ ಸನ್ನಿವೇಶ ಎದುರಾದರೂ ಅದನ್ನು ಹತೋಟಿಗೆ ತರುವಲ್ಲಿ ಸಿದ್ದವಾಗಿದೆ. ಶಾಂತಿಯುತವಾಗಿ ಗಣಪತಿ ವಿಸರ್ಜನೆ ನಡೆಯಬೇಕು. ಸಮಾಜದಲ್ಲಿ ಅಹಿತಕರ ಘಟನೆ ಹುಟ್ಟುಹಾಕಲು ಪ್ರಯತ್ನಿಸಿದರೆ ಅಂತಹವರ ವಿರುದ್ದ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರೂ ಕೂಡ ಆಗಮಿಸುವರು. ಜೊತೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 12 ಡಿವೈಎಸ್ಪಿ, 23 ಪೊಲೀಸ್ ಇನ್ಸ್ ಪೆಕ್ಟರ್, 55 ಸಬ್ ಇನ್ಸ್ ಪೆಕ್ಟರ್, 160 ಎಎಸೈ, 1500 ಪೊಲೀಸ್ ಪೇದೆಗಳು, 570 ಹೋಂ ಗಾರ್ಡ್ ಗಳು, 2 ಎಎನ್ಎಸ್ ತುಕಡಿ, 1 ಕ್ಯೂಆರ್ಬಿ ತುಕಡಿ, 23 ಡಿಎಆರ್ ತುಕಡಿ, ಕೆ ಎಸ್ ಆರ್ ಪಿ ಸಿಬ್ಬಂದಿ ಜೊತೆಗೆ 600 ಕ್ಕೂ ಅಧಿಕ ಸ್ವಯಂ ಸೇವಕರು ಹಾಗೂ ನಿವೃತ್ತಿ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜೊತೆಗೆ ಸೂಕ್ಷ್ಮ ಸ್ಥಳಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾ, ವೀಡಿಯೋ ಚಿತ್ರೀಕರಣ ನಡೆಸಲಾಗುವುದು. ಇದಕ್ಕಾಗಿ 53 ವೀಡಿಯೋ ಹಾಗೂ 223 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಅಲ್ಲದೇ ನಗರದ ಆಯಕಟ್ಟಿನ ಸೂಕ್ತ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. 222 ಸ್ಥಳಗಳನ್ನು ಗುರುತಿಸಿ ಭದ್ರತೆ ಕಲ್ಪಿಸಲಾಗಿದೆ. 50 ವಾಹನಗಳು ಬಂದೋಬಸ್ತ್ ಗೆ ನಿಯೋಜನೆಗೊಂಡಿವೆ. ಇವುಗಳು ನಗರಾದ್ಯಂತ ಸಂಚರಿಸಲಿದ್ದು, 22 ಚೀತಾ ವಾಹನಗಳ ಬಳಕೆ ಮಾಡಿಕೊಳ್ಳಲಾಗುವುದು. 2 ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಲಾಗುವುದು ಎಂದರು.

ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ ನಾಳೆ ನಗರಪಾಲಿಕೆ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸುವ ಶಾಲಾ- ಕಾಲೇಜು ಆಡಳಿತ ಮಂಡಳಿ ವಿರುದ್ದ ಕ್ರಮ ಜರುಗಿಸಲಾಗುವುದು. ಯಾವುದೇ ಅಹಿತಕರ ಘಟನೆ ನಡೆದರೆ ಆಡಳಿತ ಮಂಡಳಿಯನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ಶಿ.ವಿ. ಸಿದ್ದಪ್ಪ ಉಪಸ್ಥಿತರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...