alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ

ಶಿವಮೊಗ್ಗ : ಕಳೆದ ಬಾರಿ ಬಿಜೆಪಿ-ಕೆಜೆಪಿ ವಿಭಜನೆಯಾಗಿ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಕೂಡ ಗಳಿಸದೇ ತೀವ್ರ ಮುಖಭಂಗ ಅನುಭವಿಸಿದ್ದ ಬಿಜೆಪಿ ಈ ಬಾರಿ ಸೇಡು ತೀರಿಸಿಕೊಂಡಿದೆ.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಭದ್ರಾವತಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಜೆಡಿಎಸ್ ಕೂಡ ಹೀನಾಯ ಸೋಲು ಕಂಡಿದ್ದು, ಕಳೆದ ಬಾರಿ ಗೆಲುವು ಕಂಡಿದ್ದ ಎಂ.ಜೆ. ಅಪ್ಪಾಜಿ, ಮಧು ಬಂಗಾರಪ್ಪ, ಶಾರದಾ ಪೂರ್ಯನಾಯ್ಕ ಸೋಲುವ ಮೂಲಕ ಜೆಡಿಎಸ್ ಗೆ ನೆಲೆ ಇಲ್ಲದಂತಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್-3, ಜೆಡಿಎಸ್-3 ಹಾಗೂ ಕೆಜೆಪಿ ಒಂದು ಸ್ಥಾನ ಗಳಿಸಿತ್ತು. ಶಿಕಾರಿಪುರ ಶಾಸಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಸಂಸದರಾದ ಬಳಿಕ ಶಿಕಾರಿಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿ ಬಿ.ವೈ. ರಾಘವೇಂದ್ರ ಶಾಸಕರಾಗಿದ್ದರು.

ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲೆಯ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪ, ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ, ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ, ಸಾಗರದಲ್ಲಿ ಹರತಾಳು ಹಾಲಪ್ಪ, ಸೊರಬದಲ್ಲಿ ಕುಮಾರ್ ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರದಲ್ಲಿ ಕೆ.ಬಿ. ಅಶೋಕ್ ನಾಯ್ಕ ವಿಜೇತರಾಗಿದ್ದಾರೆ. ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ್ ವಿಜೇತರಾಗಿದ್ಧಾರೆ.

ತೀರ್ಥಹಳ್ಳಿ:
ಜಿಲ್ಲೆಗೆ ಸಂಬಂಧಪಟ್ಟಂತೆ ತೀರ್ಥಹಳ್ಳಿ ಕ್ಷೇತ್ರದ ಫಲಿತಾಂಶ ಮೊದಲು ಪ್ರಕಟಗೊಂಡಿತ್ತು. ತೀರ್ಥಹಳ್ಳಿಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದೇ ಬಿಂಬಿಸಲಾಗಿತ್ತು. ಆದರೆ ಮತದಾರರು ಆರಗ ಜ್ಞಾನೇಂದ್ರ ಅವರನ್ನು ಕೈ ಹಿಡಿದಿದ್ಧಾರೆ. ಸುಮಾರು 10ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ತಂದುಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ 2ನೇ ಸ್ಥಾನ ಪಡೆದರೆ, ಜೆಡಿಎಸ್ ಅಭ್ಯರ್ಥಿ ಆರ್.ಎಂ. ಮಂಜುನಾಥಗೌಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಸಾಗರ:
ಭಾರೀ ಕುತೂಹಲ ಮೂಡಿಸಿದ್ದ ಸಾಗರ ಕ್ಷೇತ್ರದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಸೋಲು ಕಂಡಿದ್ದಾರೆ. ಸೊರಬ ಕ್ಷೇತ್ರದಿಂದ ಕೊನೆ ಗಳಿಗೆಯಲ್ಲಿ ವಲಸೆ ಬಂದು ತೀವ್ರ ಪೈಪೋಟಿ ನಡುವೆಯೂ ಟಿಕೆಟ್ ಪಡೆದ ಹರತಾಳು ಹಾಲಪ್ಪ ಗೆಲುವು ಸಾಧಿಸಿದ್ದಾರೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಕಾಗೋಡು ತಿಮ್ಮಪ್ಪರಿಗೆ ಸಾಥ್ ನೀಡಿದ್ದರೂ ಕೂಡ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಇಲ್ಲಿ ಯಡಿಯೂರಪ್ಪರ ಸ್ಟ್ರಾಟಜಿ ಕೆಲಸ ಮಾಡಿದೆ.

ಸೊರಬ:
ಸೊರಬ ಕ್ಷೇತ್ರ ಬಂಗಾರಪ್ಪ ಕುಟುಂಬದಲ್ಲೇ ಉಳಿದುಕೊಂಡಿದೆ. ಕಳೆದ ನಾಲ್ಕೈದು ದಶಕಗಳಿಂದ ಈ ಕ್ಷೇತ್ರವನ್ನು ಬಂಗಾರಪ್ಪ ಮತ್ತು ಅವರ ಪುತ್ರರು ಪ್ರತಿನಿಧಿಸಿದ್ದು, ಒಂದು ಬಾರಿ ಮಾತ್ರ ಹರತಾಳು ಹಾಲಪ್ಪ ಈ ಕ್ಷೇತ್ರದಲ್ಲಿ ಚುನಾಯಿತರಾಗಿದ್ದರು. ಕಳೆದ ಬಾರಿ ಜೆಡಿಎಸ್ ನಿಂದ ಗೆಲುವು ಕಂಡಿದ್ದ ಮಧುಬಂಗಾರಪ್ಪ ಈ ಬಾರಿ ಸೋಲು ಕಂಡಿದ್ಧಾರೆ. 10 ವರ್ಷಗಳಿಂದ ಅಧಿಕಾರ ವಂಚಿತರಾಗಿದ್ದ ಕುಮಾರ್ ಬಂಗಾರಪ್ಪ ಬಿಜೆಪಿಗೆ ಬಂದಿದ್ದು, ಪ್ಲಸ್ ಆಗಿದೆ. ಇಲ್ಲಿಯೂ ಯಡಿಯೂರಪ್ಪರ ಕಾರ್ಯತಂತ್ರ ಕೆಲಸ ಮಾಡಿದೆ.

ಶಿವಮೊಗ್ಗ:
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಟಿಕೆಟ್ ಪಡೆಯುವಾಗಲೇ ಅವರಿಗೆ ಪೈಪೋಟಿ ಇತ್ತು. ಆದರೆ ಪಕ್ಷದ ನಾಯಕರು ಈಶ್ವರಪ್ಪ ಅವರಿಗೆ ಟಿಕೆಟ್ ಕೊಟ್ಟಿದ್ದರು. ಸಂಘಟಿತ ಪ್ರಚಾರ, ಕಾರ್ಯಕರ್ತರ ಶ್ರಮ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಟ್ಟಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಶ್ರೇಯಕ್ಕೆ ಈಶ್ವರಪ್ಪ ಪಾತ್ರರಾಗಿದ್ದಾರೆ.

ಶಿವಮೊಗ್ಗ ಗ್ರಾಮಾಂತರ:
ಭಾರೀ ಪೈಪೋಟಿಯಿಂದ ಕೂಡಿದ್ದ ಶಿವಮೊಗ್ಗ ಗ್ರಾಮಾಂತರದಲ್ಲಿ ಶಾಸಕಿ ಶಾರದಾ ಪೂರ್ಯನಾಯ್ಕ ಅವರಿಗೆ ಹಿನ್ನಡೆಯಾಗಿದ್ದು, ಬಿಜೆಪಿ ಅಅಭ್ಯರ್ಥಿ ಕೆ.ಬಿ. ಅಶೋಕ್ ನಾಯ್ಕ ಗೆಲುವು ಕಂಡಿದ್ದಾರೆ. ಸರಳತೆ ಮತ್ತು ಅಭಿವೃದ್ದಿ ಕಾರ್ಯಗಳ ಮೂಲಕ ಶಾರದಾ ಪೂರ್ಯನಾಯ್ಕ ಜನಾನುರಾಗಿಯಾಗಿದ್ದರಾದರೂ ಅವು ಮತಗಳಾಗಿ ಪರಿವರ್ತನೆಯಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿರುವ ಹಿನ್ನೆಲೆಯಲ್ಲಿ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಶಿಕಾರಿಪುರ:
ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಶಿಕಾರಿಪುರ ಮತದಾರರು ಬೆಂಬಲಿಸಿದ್ದಾರೆ. ದೇಶದ ಗಮನ ಸೆಳೆದಿದ್ದ ಈ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಯಡಿಯೂರಪ್ಪ ವಿಜೇತರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ದ್ವಿತೀಯ ಸ್ಥಾನ ಗಳಿಸಿದ್ದು, ಜೆಡಿಎಸ್ ನ ಹೆಚ್.ಟಿ.ಬಳಿಗಾರ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ಧಾರೆ.

ಭದ್ರಾವತಿ:
ಜಿದ್ದಾಜಿದ್ದಿನ ಕಣವಾಗಿದ್ದ ಭದ್ರಾವತಿಯಲ್ಲಿ ಜೆಡಿಎಸ್ ಅಭ್ಯರ್ಥಿ, ಶಾಸಕ ಎಂ.ಜೆ. ಅಪ್ಪಾಜಿಗೌಡ ಸೋಲು ಕಂಡಿದ್ಧಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ್ ಗೆಲುವಿನ ನಗೆ ಬೀರಿದ್ಧಾರೆ. ಕಳೆದ ಚುನಾವಣೆಯಲ್ಲಿ ಸಂಗಮೇಶ್ ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಈ ಬಾರಿ ಟಿಕೆಟ್ ಪಡೆದು ಅವರು ಗೆಲುವಿನ ನಗೆ ಬೀರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...