alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಕೇಟ್ ಘೋಷಣೆ ಬಳಿಕ ಚುರುಕುಗೊಂಡ ಕಾಂಗ್ರೆಸ್ ಪ್ರಚಾರ

ಶಿವಮೊಗ್ಗ : ಅಳೆದು ತೂಗಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯ ಮೂವರು ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆಯಾಗಿದೆ. ಮೂರು ಕ್ಷೇತ್ರಗಳಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದ ಕಾಗೋಡು ತಿಮ್ಮಪ್ಪನವರಿಗೆ ಟಿಕೆಟ್ ನೀಡಲಾಗಿದೆ. ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧಿಸದಿದ್ದರೆ ತಮಗೆ ಅವಕಾಶ ನೀಡುವಂತೆ ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಜಯಮಾಲಾ ಕೋರಿದ್ದರು.

ಕಾಗೋಡು ತಿಮ್ಮಪ್ಪನವರು ಪುತ್ರಿ ರಾಜನಂದಿನಿ ಅವರೂ ಆಕಾಂಕ್ಷಿಯಾಗಿದ್ದರು. ಕಂದಾಯ ಕಾಗೋಡು ತಿಮ್ಮಪ್ಪ ಕಡೆ ಕ್ಷಣದಲ್ಲಿ ಸ್ಪರ್ಧೆಗೆ ಒಲವು ತೋರಿದ ಕಾರಣ ಹೈಕಮಾಂಡ್ ಅವಕಾಶ ನೀಡಿದೆ. ಹಿರಿಯರಿಗೆ ಈ ಬಾರಿ ಟಿಕೆಟ್ ಇಲ್ಲ ಎಂದು ಹೇಳುತ್ತಲೇ ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ, ಕೆ.ಬಿ. ಕೋಳಿವಾಡ ಹಾಗೂ ಮಾಲಕರೆಡ್ಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಕಿಮ್ಮನೆ ರತ್ನಾಕರ್ ಅವರಿಗೆ ನಿರೀಕ್ಷೆಯಂತೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದು, ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಶಿವಮೊಗ್ಗ ಕ್ಷೇತ್ರದಿಂದ ಹಾಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಹಲವರು ಆಕಾಂಕ್ಷಿಗಳಿದ್ದರು ಪಕ್ಷದ ನಾಯಕರು ಕೆಬಿಪಿ ಅವರಿಗೆ ಅವಕಾಶ ನೀಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಬಂಡಾಯವಾಗಿ ಸ್ಪರ್ಧಿಸಿದ್ದ ಬಿ.ಕೆ.ಸಂಗಮೇಶ್ ಅವರಿಗೆ ಭದ್ರಾವತಿ ಕ್ಷೇತ್ರದಲ್ಲಿ ಅವಕಾಶ ದೊರೆತಿದೆ. ಇಲ್ಲಿಯೂ ಹಲವರು ಆಕಾಂಕ್ಷಿಗಳಿದ್ದರಾದರೂ ಪ್ರಮುಖವಾಗಿ ಸಂಗಮೇಶ್ ಹೆಸರನ್ನು ಪರಿಗಣಿಸಿ ಟಿಕೆಟ್ ಘೋಷಣೆಯಾಗಿದೆ.

ಇನ್ನು ಶಿಕಾರಿಪುರ ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಲತೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇಲ್ಲಿಗೆ ಹಲವರ ಹೆಸರು ಕೇಳಿಬಂದಿತ್ತಾದರೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಎದುರು ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿ ಮಾಲತೇಶ್ ಅವರಿಗೆ ಟಿಕೆಟ್ ಘೋಷಿಸಿದ್ದಾರೆ.

ಇನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಶಾಸಕ ಕರಿಯಣ್ಣ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಎಸ್. ರವಿಕುಮಾರ್, ಜಿ. ಪಲ್ಲವಿ, ಬಲದೇವ ಕೃಷ್ಣ ಮೊದಲಾದವರು ಆಕಾಂಕ್ಷಿಗಳಿದ್ದರಾದರೂ ಕರಿಯಣ್ಣರ ಪುತ್ರ ಡಾ.ಎಸ್.ಕೆ. ಶ್ರೀನಿವಾಸ್ ಕರಿಯಣ್ಣ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೊರಬ ಕ್ಷೇತ್ರದಲ್ಲಿ ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ರಾಜು ಎಂ. ತಲ್ಲೂರು ಅವರಿಗೆ ಟಿಕೆಟ್ ನೀಡಲಾಗಿದೆ. ಜೆ.ಶಿವಾನಂದಪ್ಪ, ಹುಲ್ತಿಕೊಪ್ಪ ಶ್ರೀಧರ್, ಲಕ್ಷ್ಮಿಕಾಂತ್ ಚಿಮಣೂರು, ಚಂದ್ರೇಗೌಡ ಮೊದಲಾದವರು ಪ್ರಬಲ ಆಕಾಂಕ್ಷಿಗಳಾಗಿದ್ದರಾದರೂ ಅಂತಿಮವಾಗಿ ರಾಜು ಎಂ. ತಲ್ಲೂರು ಅವರಿಗೆ ಟಿಕೆಟ್ ನೀಡಲಾಗಿದೆ.

ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸಾಗರ, ಭದ್ರಾವತಿ, ಶಿಕಾರಿಪುರ, ಸೊರಬ ಹೀಗೆ ಎಲ್ಲ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು ಚುನಾವಣಾ ಕಾವು ರಂಗೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...