alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಂವಾದ’ ಕಾರ್ಯಕ್ರಮದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ಶಿವಮೊಗ್ಗ ಜಿಲ್ಲಾಧಿಕಾರಿ

ಆಡಳಿತಾತ್ಮಕ ಸಮಸ್ಯೆಗಳಿಗೆ ಉತ್ತರ ಹುಡುಕುವುದೇ ನನ್ನ ಶೈಲಿ ಎಂದು ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ತಿಳಿಸಿದ್ದಾರೆ. ಇಂದು ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಬಗರ್ ಹುಕುಂ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಇವೆಲ್ಲವಕ್ಕೂ ಸೂಕ್ತ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆಡಳಿತಾತ್ಮಕ ಸುಧಾರಣೆಗೆ ನನ್ನ ಪ್ರಥಮ ಆದ್ಯತೆ ಇರುತ್ತದೆ. ಆಡಳಿತದಲ್ಲಿ ಕೆಲವು ನಿಯಮಗಳಿರುತ್ತದೆ. ಅದರಲ್ಲಿನ ತಪ್ಪುಗಳನ್ನು ಗುರುತಿಸಿ ಬದಲಾವಣೆ ಮಾಡಿ ಪರಿಹಾರ ಕಂಡುಕೊಳ್ಳುವುದೇ ಬಹಳ ಮುಖ್ಯ. ಇದಕ್ಕಾಗಿ ಚುರುಕುತನ ಬೇಕಾಗುತ್ತದೆ. ಕಾನೂನಿನ ತೊಡಕುಗಳು ಇರುತ್ತವೆ. ಈ ಎಲ್ಲವನ್ನು ಗುರುತಿಸಿ ಒಳ್ಳೆಯ ಆಡಳಿತ ನೀಡುವುದೇ ನನ್ನ ಗುರಿ ಎಂದರು.

ಕಷ್ಟದಿಂದ ಬಂದವನು:

ಅನೇಕ ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವಂತೆ ನಾನೂ ಕೂಡ ಬಡತನದಲ್ಲೆ ಬೆಳೆದೆ. ಬಡ ಕೃಷಿ ಕುಟುಂಬ ನಮ್ಮದು. ಮೈಸೂರು ಜಿಲ್ಲೆಯ ಕೆ.ಆರ್. ನಗರದ ಕೆಸ್ತೂರು ನಮ್ಮ ಊರು. ಕೆಲವೊಮ್ಮೆ ಊಟಕ್ಕೂ ತೊಂದರೆಯ ಪರಿಸ್ಥಿತಿ. ಎಲ್ಲರಂತೆ ನಾನೂ ಕೂಲಿ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಿದ್ದೇನೆ. ಎಂಎ ಓದುವಾಗಲೂ ಕೂಡ ನಾನು ಮೇಸ್ತ್ರಿಯಾಗಿ ಕೆಲಸ ಮಾಡಿದ್ದೇನೆ. ಗುರಿ, ಓದುವ ತವಕ ಇವೆಲ್ಲವೂ ಇದ್ದರೆ ಸಾಧನೆ ಕಷ್ಟವಾಗುವುದಿಲ್ಲ ಎಂದರು.

ಬಡ ಜನರ ಕಷ್ಟದ ಅರಿವು ನನಗೆ ಇದೆ. ನಾನೂ ಕೂಡ ಫುಟ್ಪಾತ್ ನಲ್ಲಿ ಕೆಲಸ ಮಾಡಿದ್ಧೇನೆ. ಒಂದು ಜಾತಿ ಆದಾಯದ ಪ್ರಮಾಣ ಪತ್ರ ಪಡೆಯಲು ಎಷ್ಟು ಕಷ್ಟ ಎಂಬುದನ್ನು ನಾನು ಬಲ್ಲೆ. ಹಾಗಾಗಿಯೇ ಆಡಳಿತದ ಎಲ್ಲ ತಪ್ಪು, ಒಪ್ಪುಗಳು ನನಗೆ ತಿಳಿದಿವೆ. ಇದರಿಂದ ಒಳ್ಳೆಯ ಆಡಳಿತ ನೀಡಬೇಕೆಂಬ ತುಡಿತ ಮೊದಲಿನಿಂದಲೂ ನನಗಿದೆ ಎಂದರು.

ವಿವಿಧ ಹುದ್ದೆಗಳಲ್ಲಿ ಕೆಲಸ:

ಮೊದಲು ನನಗೆ ಕೆಲಸ ಸಿಕ್ಕಿದ್ದು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಹೈಸ್ಕೂಲ್ ಶಿಕ್ಷಕನಾದೆ. ಈ ಸಂದರ್ಭದಲ್ಲಿಯೇ ಪಿಯುಸಿ ಮಕ್ಕಳಿಗೂ ಕೂಡ ಅರ್ಥ ಶಾಸ್ತ್ರ ಬೋಧಿಸಿದೆ. ಅದಾದ ನಂತರ ಎಂಎಬಿಎಡ್ ಮಾಡಿ ಕೆಎಎಸ್ ಶಿಕ್ಷಣ ಪೂರೈಸಿ ಹೊನ್ನಾಳಿ, ಚನ್ನಗಿರಿಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದೆ. ನಂತರ ದಾವಣಗೆರೆ ಜಿಲ್ಲೆಯಲ್ಲಿ ಎಸಿ ಆಗಿ ಕೆಲಸ ನಿರ್ವಹಿಸಿದೆ ಎಂದರು.

ಚಿಕ್ಕಮಗಳೂರು ನನ್ನ ಪ್ರೀತಿಯ ಜಿಲ್ಲೆ. ಇಲ್ಲಿ ದಟ್ಟವಾದ ಅನುಭವಗಳು ನನಗಾಗಿದೆ. ನಕ್ಸಲ್ ಹೋರಾಟಗಳನ್ನು ಕೂಡ ಕಂಡಿದ್ದೇನೆ. ಅನೇಕ ಸಂತ್ರಸ್ಥ ಮಕ್ಕಳಿಗೆ ನೆರವು ನೀಡಿದ್ಧೇನೆ. ಮಲೆನಾಡು ನನ್ನನ್ನು ಪುಳಕಿತಗೊಳಿಸಿದೆ. ಎಲ್ಲರ ಸ್ನೇಹ, ವಿಶ್ವಾಸ, ಪ್ರೀತಿ ನನಗೆ ಸಿಕ್ಕಿದೆ. ನಂತರ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನಾನು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿದ್ದೇನೆ ಎಂದು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.

ಪ್ರಮುಖವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಕಡತಗಳೇ ಕಾಣೆಯಾಗುತ್ತಿರುವುದು ಕಂಡುಬಂದಿತ್ತು. ಕೆಲವು ಭ್ರಷ್ಟಾಚಾರಗಳು ಕೂಡ ನುಸುಳಲು ಇದು ಕಾರಣವಾಗಿತ್ತು. ಹೀಗಾಗಿ ಕಾಗದ ರಹಿತ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಇ-ಆಡಳಿತ ಜಾರಿಗೆ ತಂದೆ. ಗೆಜೆಟಿಯರನ್ನು ಆನ್ಲೈನ್ ಗೆ ಅಳವಡಿಸಿದೆ. ನಕಲಿ ಮತದಾರರ ಪಟ್ಟಿಯನ್ನು ಗುರುತಿಸಿ ರದ್ದು ಮಾಡಿದ್ದೇನೆ. ಹೀಗೆ ಹಲವು ಕೆಲಸಗಳನ್ನು ಮಾಡಿದ ತೃಪ್ತಿ ನಮಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಬಗರ್ ಹುಕುಂ, ಚರಂಡಿ, ಕುವೆಂಪು ರಂಗಮಂದಿರ, ಮಲೆನಾಡಿನಲ್ಲಿರುವ ಸಂಕಗಳು, ಮಳೆಯಿಂದಾದ ಅತಿವೃಷ್ಟಿ, ರಸ್ತೆ, ಸೇತುವೆಗಳ ದುರಸ್ತಿ ಹೀಗೆ ಹಲವು ಸಮಸ್ಯೆಗಳು ಈಗಾಗಲೇ ನನಗೆ ತಿಳಿದಿವೆ. ಅಧಿಕಾರಿಗಳೊಡನೆ ಸಮಸ್ಯೆಗಳ ಜೊತೆ ಚರ್ಚಿಸಿರುವೆ. ಹಲವು ಆಡಳಿತ ಸುಧಾರಣಾ ಕ್ರಮಗಳನ್ನು ನಾನು ತೆಗೆದುಕೊಳ್ಳುತ್ತೇನೆ. ಒಳ್ಳೆಯ ಆಡಳಿತ ನೀಡಲು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಲೇ ಜನಪರ ಆಡಳಿತ ನೀಡುತ್ತೇನೆ. ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮೊದಲ ಆದ್ಯತೆ ನನ್ನದು ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ವೃತ್ತಿನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೂರ್ಯನಾರಾಯಣ್ ಇದ್ದರು. ಹೊನ್ನಾಳಿ ಚಂದ್ರಶೇಖರ್ ಸ್ವಾಗತಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...