alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಲೆಂಬುದು ಅಲ್ಪ ವಿರಾಮವಷ್ಟೇ….

photorealistic 3d sky-high future ahead street sign

ಪಿಯುಸಿ, ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಲ್ಲಿ ಸುಖ ಮತ್ತು ದುಃಖವನ್ನು ಆವರಿಸುವ ಕ್ಷಣ. ಬದುಕಿನ ಮಹತ್ತರ ಕ್ಷಣದ ಆನಂದ ಮತ್ತು ದುಃಖ.

ಎಸ್, ಇಡೀ ವರ್ಷ ಪಟ್ಟ ಕಷ್ಟ, ಹತ್ತಾರು ವರ್ಷಗಳ ಕನಸು ಎಲ್ಲವೂ ನನಸಾಗುವ ಹೊತ್ತು. ಎಲ್ಲ ಪ್ರಯತ್ನಗಳ ಫಲ ಎಂಬಂತೆ ಬಹುತೇಕ ವಿದ್ಯಾರ್ಥಿಗಳು ಗೆಲುವಿನ ಗುರಿ ದಾಟಿದ್ದಾರೆ. ಖುಷಿಯಲ್ಲಿ ತೇಲುತ್ತಿದ್ದಾರೆ. ಇವರಿಗೆ ಸಾವಿರ ಜನ ವಿಶ್ ಮಾಡಲು ಕಾದು ನಿಂತಿದ್ದಾರೆ. ಸನ್ಮಾನಗಳ ಸುರಿಮಳೆ ನಡೆಯಲಿದೆ. ಇದೇ ಹೊತ್ತಿಗೆ ಇನ್ನೂ ಸಾಕಷ್ಟು ಜನ ಈ ಹೋರಾಟದಲ್ಲಿ ವಿಫಲರಾಗಿದ್ದಾರೆ. ಗುರಿಯನ್ನು ಮುಟ್ಟುವಲ್ಲಿ ವಿಫಲರಾಗಿದ್ದಾರೆ. ಅನಿರೀಕ್ಷಿತ ಸೋಲು ಅವರನ್ನು ಕಂಗಾಲು ಮಾಡಿದೆ. ಕೆಲವರಿಗೆ ಏನು ಮಾಡಿದರೂ ವಿದ್ಯೆ ದಕ್ಕದ ಪರಿಸ್ಥಿತಿ. ಇನ್ನು ಕೆಲವರಿಗೆ ತಮ್ಮ ಗೆಲುವಿನ ಗುರಿ ಮುಟ್ಟುವ ಕ್ಷಣದಲ್ಲಿ ಅನಿರೀಕ್ಷಿತ ಸೋಲು ಆವರಿಸಿಬಿಟ್ಟಿದೆ.

ಗೆದ್ದವರ ಜೊತೆ ಸಾವಿರ ಜನ ಇದ್ದಾರೆ. ಇಡೀ ಸಮಾಜ ನಿಂತು ಬಿಟ್ಟಿದೆ. ಸಮೂಹ ಅವರ ಬೆನ್ನು ತಟ್ಟುತ್ತಿದೆ. ಆದರೆ ಸೋತ ಮಂದಿಯ ಜೊತೆ ಇಂತಹ ಕ್ಷಣದಲ್ಲಿ ನಾವು ನಿಲ್ಲಬೇಕಾಗಿದೆ. ಅವರಿಗೆ ಸಾಂತ್ವನ ಬೇಕಾಗಿದೆ. ಬೆನ್ನ ಮೇಲೆ ಕೈ ಇಟ್ಟು ಒಂದು ಜೊತೆಗಿದ್ದೇವೆ ಎನ್ನಬೇಕಾಗಿದೆ. ಕೈ ಹಿಡಿದು ಎತ್ತಿ ಹಿಡಿದು ನಿಲ್ಲಿಸಬೇಕಾಗಿದೆ.

ಹೆದರಬೇಡಿ ಮಕ್ಕಳೇ. ಎಲ್ಲೋ ತಪ್ಪಾಗಿದೆ. ಇನ್ನು ಮುಂದೆ ಆ ತಪ್ಪು ಬೇಡ. ಅಷ್ಟೇ ಹೊರತು ಫೇಲ್ ಆದ ಮಾತ್ರಕ್ಕೆ ನೀವು ಕುಗ್ಗಬೇಡಿ. ಕಡಿಮೆ ಅಂಕ ಬಂದ ಮಾತ್ರಕ್ಕೆ ನೀವು ಅಸಮರ್ಥರಲ್ಲ, ದಡ್ಡರೂ ಅಲ್ಲ, ಏಕೆಂದರೆ ನಮ್ಮ ಎದುರು ಬಿಲ್‌ ಗೇಟ್ಸ್ ಇದ್ದಾರೆ. ನಿಮ್ಮೆದುರು ಅಂಬಾನಿ ಜೀವನದ ಗೆಲುವಿನ ಹಾದಿಯ ಚಿತ್ರವಿದೆ. ಬಿಲ್‌ ಗೇಟ್ಸ್ ಸೋಲಿನಿಂದಲೇ ಗೆಲುವಿನ ಮೆಟ್ಟಿಲನ್ನು ಕಟ್ಟಿ ಹತ್ತಿ ನಿಂತವರು. ಸೋಲೆಂಬುದು ಅಲ್ಪ ವಿರಾಮವೇ ಹೊರತು ಪೂರ್ಣ ವಿರಾಮವಲ್ಲ!

ಪರೀಕ್ಷೆ ಫಲಿತಾಂಶ ಬಂದಾಕ್ಷಣ ನಮ್ಮೆದುರು ಗೊಂದಲದ ಲೋಕ ಎದುರಾಗುತ್ತದೆ. ಒಂದೆಡೆ 90 ಕ್ಕಿಂತ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳು, ಇನ್ನೊಂದೆಡೆ 60-70 ಅಂಕಗಳ ನಡುವೆ ತೊಳಲಾಡುವವರು. ಇವರ ನಡುವೆ ಗುರಿ ಮುಟ್ಟುವಲ್ಲಿ ವಿಫಲವಾದ ವಿದ್ಯಾರ್ಥಿಗಳು, ಮಾನಸಿಕವಾಗಿ ಜರ್ಝರಿತವಾಗಿ ಕೂತ ನಪಾಸಾದ ಹುಡುಗರು. ಇಡೀ ಜಗತ್ತಿನಲ್ಲಿ ನಮ್ಮಷ್ಟು ನತದೃಷ್ಟವಂತರು, ಯಾರಿಗೂ ಬೇಡವಾದ ವ್ಯಕ್ತಿಗಳು ಬೇರಾರೂ ಇಲ್ಲ ಎಂಬ ಮನಃಸ್ಥಿತಿ, ಶೂನ್ಯವೇ ಕವಿದ ಭಾವದಲ್ಲಿ ನರಳಾಡುವವರು ಇದ್ದಾರೆ. ನಾವೇಕೆ ಇಷ್ಟು ದಡ್ಡರಾದೆವು? ಈ ಜಗತ್ತಿನಲ್ಲಿ ನಮಗಿನ್ನು ಬದುಕುವ ಅವಕಾಶವೇ ಇಲ್ಲವಾ. ಉದ್ಯೋಗದ ಕನಸು ಕೇವಲ ಕನಸಷ್ಟೇ ಎಂಬ ನಿರ್ಭಾವುಕ ಸ್ಥಿತಿ ಇವರನ್ನು ಆವರಿಸಿಕೊಳ್ಳುತ್ತದೆ. ಇಂತಹ ಹೊತ್ತಿನಲ್ಲಿ ಇಡೀ ಸಮಾಜ ಟಾಪರ್‌ಗಳ ಬಗ್ಗೆ ಕೊಡುವ ಗಮನಕ್ಕಿಂತ ಇಂತಹ ಮಕ್ಕಳ ಕಡೆಗೆ ಗಮನ ನೀಡಬೇಕು. ಇವರನ್ನು ಆ ಮನಃಸ್ಥಿತಿಯಿಂದ ಮೇಲೆತ್ತಲು ಯತ್ನಿಸಬೇಕು. ಕುಸಿದು ಬೀಳುತ್ತಿರುವ ಹುಡುಗರ ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸಬೇಡಿ.

ನಮ್ಮ ಮಕ್ಕಳು ಟಾಪರ್ ಎಂದು ಗೊತ್ತಾದಾಗ ಸಂತೋಷ ಹೇಳಲು ಸಾಧ್ಯವಿಲ್ಲದಷ್ಟು, ನಿಜ. ಈ ಮನಃಸ್ಥಿತಿ ತಪ್ಪೇನಲ್ಲ. ನಮ್ಮ ಮಕ್ಕಳು ಗೆಲುವು ದಾಖಲಿಸಿದಾಗ ನಾವು ಸಂತೋಷಪಡದೆ ಇನ್ನಾರು ಸಂತೋಷ ಪಡಲು ಸಾಧ್ಯ? ಆದರೆ ಪಕ್ಕದ ಮನೆಯ ಹುಡುಗನ ಕಡೆಗೂ ಸ್ವಲ್ಪ ಗಮನ ಹರಿಸಿ. ನಮ್ಮ ಸಂತೋಷದ ಹುಚ್ಚಿನಲ್ಲಿ ಅವನ ಭವಿಷ್ಯ ಕೊಚ್ಚಿ ಹೋಗಬಾರದು. ಯಾಕೆ ಆತ ಕಡಿಮೆ ಅಂಕ ತೆಗೆದುಕೊಂಡನೋ ಗೊತ್ತಿಲ್ಲ. ಆದರೆ ಅಂಕ ಬಂದಾಗಿದೆ. ಆ ಸ್ಥಿತಿ ಬದಲಿಸಲು ಸಾಧ್ಯವಿಲ್ಲ. ಈಗ ಬದಲಿಸಬೇಕಾಗಿರುವುದು ಮಾನಸಿಕ ಅಘಾತಕ್ಕೆ ಗುರಿಯಾಗಿರುವ ಆ ಹುಡುಗನ ಮನಃಸ್ಥಿತಿಯನ್ನು. ಆತನಲ್ಲಿ ಒಂದಿಷ್ಟು ಆತ್ಮವಿಶ್ವಾಸ ತುಂಬಬೇಕು.

ಇಂತಹ ಮಕ್ಕಳ ಪೋಷಕರು ಕೂಡ ಗಮನಿಸಬೇಕು. ಮಕ್ಕಳು ಎತ್ತರಕ್ಕೆ ಏರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಹಾಗಾದಾಗ ನಿಮ್ಮೆಲ್ಲ ನಿರಾಶೆ, ಆಕ್ರೋಶವನ್ನು ಕೆಳಗೆ ಬಿದ್ದ ಮಕ್ಕಳ ಎದುರು ಪ್ರದರ್ಶಿಸಬೇಡಿ. ಈ ಹೊತ್ತಿನಲ್ಲಿ ಆ ಮಕ್ಕಳಿಗೆ ಬೇಕಾಗಿರುವುದು ಒಂದಿಷ್ಟು ಸಾಂತ್ವನ. ಕುಸಿದು ಬಿದ್ದ ಮನಃಸ್ಥಿತಿಗೆ ಎದ್ದು ನಿಲ್ಲುವ ಸಣ್ಣ ಆಧಾರ. ಒಂದು ಸೋಲು ಬದುಕನ್ನು ಮುಕ್ತಾಯಗೊಳಿಸುವುದಿಲ್ಲ ಎಂದು ಹೇಳುತ್ತಾ ಆತ್ಮವಿಶ್ವಾಸ ತುಂಬಿ. ನೀನೊಬ್ಬ ಅಯೋಗ್ಯ ಎಂದು ಜರಿಯಬೇಡಿ. ನಿನ್ನಿಂದ ತಪ್ಪಾಗಿದೆ, ಮುಂದೆ ತಿದ್ದಿಕೊಂಡು ಹೊಸ ಬದುಕು ರೂಪಿಸಿಕೋ, ನಿನ್ನ ಜೊತೆ ನಾನಿರುತ್ತೇನೆ. ನಿನಗೆ ನಾನು ಆಸರೆಯಾಗುತ್ತೇನೆ. ಕಣ್ಣೆತ್ತಿ ನೋಡದ ಈ ಜಗತ್ತಿನ ಎದುರು ಮತ್ತೆ ನೀನು ಎದ್ದು ನಿಲ್ಲುತ್ತಿಯಾ ಎಂಬ ಆತ್ಮವಿಶ್ವಾಸದ ನುಡಿಯನ್ನು ಕೊಡಿ. ಆತನ ಫಲಿತಾಂಶ ಮತ್ತೆ ತರಬಹುದು, ಆದರೆ ಹೆಚ್ಚು ಕಮ್ಮಿಯಾಗಿ ಜೀವ ಹೋದರೆ ಮತ್ತೆ ಆ ಜೀವ ಮತ್ತೆ ತರಲಾಗುವುದಿಲ್ಲ ಎಂಬುದನ್ನು ನೆನಪಿಡಿ.

ವಿದ್ಯಾರ್ಥಿಗಳೇ ನೀವು ಗಮನಿಸಿ. ನಿಜ, ನಿಮ್ಮಿಂದ ತಪ್ಪಾಗಿದೆ. ಹಾಗೆಂದು ಒಂದು ತಪ್ಪು ಆದಾಕ್ಷಣ ನಿಮ್ಮ ಭವಿಷ್ಯ ಇಲ್ಲಿಗೆ ಮುಗಿದು ಹೋಗಿಲ್ಲ. ನಿಮಗೆ ನೀವೇ ಸವಾಲು ಹಾಕಿಕೊಳ್ಳಿ. ಸೋತ ಹೆಜ್ಜೆಯ ಗುರುತಿನಲ್ಲಿಯೇ ನಿಂತು ಮತ್ತೆ ಎತ್ತರಕ್ಕೆ ಏರಲು ಸಿದ್ಧರಾಗಿ. ಎಲ್ಲ ಚೈತನ್ಯವನ್ನು ಒಟ್ಟಿಗೆ ಮಗೆದುಕೊಂಡು ಎದ್ದು ನಿಲ್ಲಿ. ಓದಬೇಕಾದ ಸಂದರ್ಭದಲ್ಲಿ ಓದದೆ ಮಾಡಿದ ತಪ್ಪಿನಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಇದನ್ನು ಒಪ್ಪಿಕೊಳ್ಳಿ ಮತ್ತು ತಿದ್ದಿಕೊಳ್ಳಿ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಆದ ತಪ್ಪಿಗೆ ಪ್ರಾಯಶ್ಚಿತ ಎಂದರೆ ನಮ್ಮ ಬದುಕು ಕೊನೆಗಾಣಿಸುವುದಲ್ಲ. ಬದಲಾಗಿ ಆತ್ಮ ವಿಮರ್ಶೆ ಮಾಡಿಕೊಂಡು ಈ ಜಗತ್ತಿಗೆ ನಿಮ್ಮ ತಾಕತ್ತನ್ನು ಪ್ರದರ್ಶಿಸಿ.

ಈ ಸಂದರ್ಭದಲ್ಲಿ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಬಿಲ್‌ ಗೇಟ್ಸ್ ಅವರ ಬದುಕಿನ ಘಟನೆ ಮತ್ತೆ ಮತ್ತೆ ಮೆಲುಕು ಹಾಕಿ. ಬಿಲ್ ಗೇಟ್ಸ್ ಕೂಡ ಕೆಳ ಹಂತದ ಪರೀಕ್ಷೆಯಲ್ಲಿ ಸಾಲು ಸಾಲಾಗಿ ಫೇಲ್ ಆಗಿದ್ದರು. ಅವರ ಜೊತೆಗಾರರೆಲ್ಲ ಪಾಸಾಗಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಬಿಲ್‌ ಗೇಟ್ಸ್ ಧೃತಿಗೆಡಲಿಲ್ಲ. ಸೋಲನ್ನು ಮುಂದಿಟ್ಟು ಶೋಕಿಸುತ್ತಾ ಕೂರಲಿಲ್ಲ. ಸಾಫ್ಟ್‌ವೇರ್ ಕಂಪನಿ ಕಟ್ಟಿದರು. ತಮ್ಮ ಸಾಮರ್ಥ್ಯವನ್ನು ಅಲ್ಲಿ ತೋರಿಸಿದರು. ಎತ್ತರಕ್ಕೆ ಬೆಳೆದರು. ತಮ್ಮನ್ನು ಹಿಂದಿಕ್ಕಿ ಮುಂದೆ ಸಾಗಿ ಇಂಜಿನಿಯರ್ ಆದವರು ತಮ್ಮ ಕಂಪನಿಯಲ್ಲಿ ಕೆಲಸಕ್ಕಾಗಿ ಕೈಕಟ್ಟಿ ನಿಲ್ಲುವಂತೆ ಮಾಡಿದರು. ನಿಮ್ಮ ಸಾಧನೆ, ನಿಮ್ಮ ಬುದ್ದಿವಂತಿಕೆ, ನಿಮ್ಮ ಪ್ರತಿಭೆ ಎಲ್ಲವೂ ಯಾವುದೋ ಒಂದು ಪರೀಕ್ಷೆಯಲ್ಲಿ ಗೊತ್ತಾಗುವುದಿಲ್ಲ. ಸುಪ್ತವಾಗಿರುವ ನಿಮ್ಮ ಸುಪ್ತ ಪ್ರತಿಭೆಯನ್ನು ಹುಡುಕುವ ಕೆಲಸ ಮಾಡಿ. ನಿಮ್ಮ ಒಂದು ಸೋಲು ಭವಿಷ್ಯದ ನೂರು ಗೆಲುವುಗಳಿಗೆ ದಾರಿ ದೀಪವಾಗಬೇಕು.

ಗೋಪಾಲ್ ಎಸ್ ಯಡಗೆರೆ, ಹಿರಿಯ ಪತ್ರಕರ್ತರು

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...