alex Certify
ಕನ್ನಡ ದುನಿಯಾ       Mobile App
       

Kannada Duniya

‘ರಾಜ್ಯದಲ್ಲಿ 200 ಜನರಿಕ್ ಔಷಧ ಮಳಿಗೆ ಆರಂಭ’

ಸಾರ್ವಜನಿಕರಿಗೆ ಸುಲಭ ದರದಲ್ಲಿ ಔಷಧ ದೊರಕಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಜನರಿಕ್ ಔಷಧ ಮಳಿಗೆಗಳನ್ನು ಪ್ರಾರಂಭಿಸಿದೆ. ಇಲ್ಲಿ ಎಲ್ಲ ಅಗತ್ಯ ಔಷಧ ಲಭ್ಯವಿರಬೇಕು ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದರು.

ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔಷಧ ಕಂಪೆನಿಗಳು ಹಗಲು ದರೋಡೆಗೆ ನಡೆಸುತ್ತಿದ್ದವು. ಇದಕ್ಕೆ ನಿಯಂತ್ರಣ ಹಾಕಬೇಕೆಂಬ ಉದ್ದೇಶದಿಂದ ಸರ್ಕಾರ ಜನರಿಕ್ ಔಷಧ ಮಳಿಗೆಯನ್ನು ಪ್ರಾರಂಭ ಮಾಡಿದೆ. ಸರ್ಕಾರದ ಸದುದ್ದೇಶ ಜನರನ್ನು ತಲುಪಬೇಕು ಎಂದರು.

ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಮಾಡಿದ ಔಷಧಗಳನ್ನೇ ಜನರಿಕ್ ಮಳಿಗೆಗಳಿಗೆ ಪೂರೈಸಲಾಗುತ್ತಿದೆ. ಖಾಸಗಿ ಔಷಧಾಲಯಗಳಿಗಿಂತ ಶೇ.70 ರಷ್ಟು ಬೆಲೆ ಕಡಿಮೆ ಇದೆ. ರಾಜ್ಯ ಸರ್ಕಾರ ಬಿಪಿಬಿಐ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯದಲ್ಲಿ 200 ಜನರಿಕ್ ಔಷಧ ಮಳಿಗೆಗಳನ್ನು ಪ್ರಾರಂಭ ಮಾಡುತ್ತಿದೆ ಎಂದು ತಿಳಿಸಿದರು.

ಜನರಿಕ್ ಔಷಧ ಮಳಿಗೆಯಲ್ಲಿ ಯಾವುದೇ ಬ್ರಾಂಡೆಡ್ ಕಂಪೆನಿಯ ಔಷಧಗಳನ್ನು ನೀಡುವಂತಿಲ್ಲ. ಕೇವಲ ಜನರಿಕ್ ಔಷಧಿಗಳನ್ನು ಮಾತ್ರ ವಿತರಿಸಬೇಕು. ಕೆಲವೆಡೆ ಬ್ರಾಂಡೆಡ್ ಕಂಪೆನಿಗಳ ಔಷಧಿಗಳನ್ನು ಜನರಿಕ್ ಔಷಧ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಇದು ಸೂಕ್ಷ್ಮ ವಿಚಾರ. ಇದನ್ನು ಗಮನಿಸಿ ಲೋಪ ಕಂಡುಬಂದರೆ ದಂಡಿಸುತ್ತೇನೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಗಳನ್ನು ಖಾಸಗಿಯಾಗಿ ಕೊಂಡುಕೊಳ್ಳುವಂತೆ ಚೀಟಿ ಬರೆದುಕೊಡುವ ಪ್ರಶ್ನೆಯೇ ಇಲ್ಲ. ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಈಗ ಕೇಳಿಬರುತ್ತಿರುವ ದೂರುಗಳ ಬಗ್ಗೆ ಎರಡು ದಿನಗಳಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿಬಂಧಕ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈಗಾಗಲೇ ಸದನ ಸಮಿತಿ ರಚನೆಯಾಗಿದ್ದು, ವಾರದಲ್ಲಿ ಸಭೆ ನಡೆಸಿ ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಕೆ ಮಾಡಲಾಗುವುದು. ಮಸೂದೆ ಮಂಡನೆಗಾಗಿ ಸದ್ಯದಲ್ಲೇ ವಿಶೇಷ ಅಧಿವೇಶನ ಕರೆಯಲಾಗುವುದು ಎಂದರು.

ರಾಜ್ಯದ ಎಲ್ಲ ಜನರಿಗೂ ಸುಲಭವಾಗಿ ಆರೋಗ್ಯ ಸೇವೆ ಲಭ್ಯವಾಗಬೇಕು. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅತಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ತಿದ್ದುಪಡಿ ಮಸೂದೆ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು ಲಭ್ಯರಾಗದಿದ್ದಲ್ಲಿ ಆಯುಷ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ 1212 ತಜ್ಞ ವೈದ್ಯರ ಕೊರತೆ ಇದೆ. ಈ ಹಿಂದೆ ಲೋಕಸೇವಾ ಆಯೋಗದ ವೈದ್ಯರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಇದಕ್ಕೆ ಸೂಕ್ತ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ವೈದ್ಯರ ನೇಮಕಾತಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ವೈದ್ಯರಿಗೆ 1.25 ಲಕ್ಷ ವೇತನ ನಿಗದಿಪಡಿಸಲಾಗಿತ್ತು. ಇದಕ್ಕೂ ಸ್ಪಂದನೆ ದೊರಕಲಿಲ್ಲ. ಕೊನೆಯದಾಗಿ ತಜ್ಞ ವೈದ್ಯರಿಂದಲೇ ಬಿಡ್ ಕರೆಯಲಾಗಿದೆ. ಇದರಂತೆ ಕೆಲವು ಜಿಲ್ಲೆಗಳಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ 54 ವೈದ್ಯಕೀಯ ಕಾಲೇಜುಗಳಿವೆ. ಪ್ರತಿ ವರ್ಷ 5 ಸಾವಿರ ವೈದ್ಯರು ಪದವಿ ಪಡೆದು ಹೊರಬರುತ್ತಿದ್ದಾರೆ. ವೈದ್ಯರುಗಳು ಸೇವೆ ಮಾಡಲು ಮುಂದಾಗಬೇಕು. ರಾಜ್ಯ ನಮ್ಮದು, ಜನತೆ ನಮ್ಮವರು ಎಂಬ ಭಾವನೆ ಹೊಂದಬೇಕು. ಸಮಾಜದ ಋಣ ತೀರಿಸುವ ಮನೋಭಾವ ವೈದ್ಯರು ಹೊಂದಬೇಕಿದೆ ಎಂದರು.

ವಿಶೇಷವಾಗಿ ಮಲೆನಾಡು ಪ್ರದೇಶದಲ್ಲಿ ಆಂಬುಲೆನ್ಸ್ ಕೊರತೆ ಇದೆ. ಇದರಿಂದಾಗಿ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಹೀಗಾಗಿ ಪ್ರತಿ 10-15 ಕಿ.ಮೀ.ಗೆ ಒಂದು ಆಂಬುಲೆನ್ಸ್ ಸೇವೆ ಒದಗಿಸಲು ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಸದ್ಯದಲ್ಲೇ ಅದನ್ನು ಅನುಷ್ಟಾನಕ್ಕೆ ತರಲಾಗುತ್ತಿದೆ. ಈ ಯೋಜನೆಗೆಂದೇ ಹೊಸ ಆಂಬುಲೆನ್ಸ್ ಖರೀದಿಸಲಾಗುವುದು ಎಂದರು.

ಈಗಾಗಲೇ ಇಲಾಖೆಯಲ್ಲಿ ಖಾಲಿ ಇದ್ದ  ಲ್ಯಾಬ್ ಟೆಕ್ನಿಷಿಯನ್, ಎಎನ್ಎಂ, ಡಿ ಗ್ರೂಪ್ ನೌಕರರ ಹುದ್ದೆ ಭರ್ತಿ ಮಾಡಲಾಗಿದೆ. ಫಾರ್ಮಸಿಸ್ಟ್ ಹುದ್ದೆ ಕೆಲವೆಡೆ ಖಾಲಿ ಇದ್ದು ಭರ್ತಿಗೆ ಕ್ರಮ ವಹಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಆರೋಗ್ಯ ಇಲಾಖೆ ನಿರ್ದೇಶಕ ನಟರಾಜ್, ಹೆಚ್ಚುವರಿ ನಿರ್ದೇಶಕ ರತನ್, ಇಲಾಖೆ ಆಯುಕ್ತ ಮೀನಾ, ಜಿಲ್ಲಾಧಿಕಾರಿ ಎಂ. ಲೋಕೇಶ್, ಜಿ.ಪಂ. ಸಿಇಓ ರಾಕೇಶ್ ಕುಮಾರ್ ಉಪಸ್ಥಿತರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...