alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿಯೂ ಕಾಂಗ್ರೆಸ್ ಬೆಂಬಲಿಸಲು ರಾಹುಲ್ ಮನವಿ

ಶಿವಮೊಗ್ಗ : ಜನರ ಆಶೋತ್ತರಗಳಿಗೆ ಸ್ಪಂದಿಸಿರುವ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ತರಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ನಗರದಲ್ಲಿ ಜನಾಶೀರ್ವಾದ ರೋಡ್ ಶೋ ಬಳಿಕ ಗೋಪಿ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಅನ್ನಭಾಗ್ಯ ಯೋಜನೆ ಮೂಲಕ ಕೋಟ್ಯಂತರ ಜನರಿಗೆ ಹಸಿವು ಮುಕ್ತವಾಗಿಸಿದೆ.

ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ರಾಜ್ಯದಲ್ಲಿ ಯಾರೂ ಉಪವಾಸದಿಂದ ನರಳಬಾರದು ಎಂದು ಇಂದಿರಾ ಕ್ಯಾಂಟಿನ್ ಮೂಲಕ ಕನಿಷ್ಟ ದರದಲ್ಲಿ ಉಪಹಾರ, ಭೋಜನ ನೀಡುತ್ತಿದೆ. ಹೀಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಪರ ಸರ್ಕಾರವಾಗಿದೆ ಎಂದರು.

ದೇಶದಲ್ಲಿ ರೈತರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತ ಪರ ಕಾಳಜಿ ವ್ಯಕ್ತಪಡಿಸುತ್ತಿಲ್ಲ. ರೈತರ ಸಾಲ ಮನ್ನಾ ಮಾಡುವಂತೆ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿದರೆ ಅದಕ್ಕೂ ಸ್ಪಂದನೆ ನೀಡಲಿಲ್ಲ ಎಂದು ದೂರಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ 4 ವರ್ಷ ಕಳೆದಿದೆ. ಅವರು ನೀಡಿದ ಭರವಸೆಗಳಲ್ಲಿ ಯಾವುದನ್ನು ಇದುವರೆಗೂ ಈಡೇರಿಸಿಲ್ಲ. ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಭರವಸೆ ಹಾಗೆಯೇ ಉಳಿದಿದೆ. ಅಲ್ಲದೇ ಬೆಳೆಗಳಿಗೆ ಯೋಗ್ಯ ಧಾರಣೆ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂ. ನೀಡುತ್ತೇವೆ ಎಂದಿದ್ದರು. ಕೊಟ್ಟ ಮಾತನ್ನು ಇದುವರೆಗೂ ಈಡೇರಿಸಿಲ್ಲ ಎಂದು ಆಪಾದಿಸಿದರು.

ದೇಶದಲ್ಲಿನ ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ವಾಗ್ದಾನ ಮಾಡಿದ್ದರು. ಪ್ರಧಾನಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಅಕ್ಕಪಕ್ಕದಲ್ಲಿದ್ದವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲು ವಾಸ ಅನುಭವಿಸಿ ಬಂದಿದ್ದರು. ಭ್ರಷ್ಠಾಚಾರ ಕುರಿತು ಮಾತನಾಡುವ ಪ್ರಧಾನಿ ತಮ್ಮ ಜೊತೆಯಲ್ಲಿ ಭ್ರಷ್ಟಾಚಾರಿಗಳನ್ನು ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಕುರಿತು ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಯುದ್ದ ವಿಮಾನ ಖರೀದಿ ಒಪ್ಪಂದದಲ್ಲೂ ಸಾಕಷ್ಟು ಆರೋಪವಿದೆ. ಆದರೆ ಪ್ರಧಾನಿಗಳು ಈ ಕುರಿತು ಒಂದೇ ಒಂದು ಮಾತು ಆಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡ ರೈತರ ಸಾಲ ಮನ್ನಾ ಮಾಡುವುದಕ್ಕೆ ಕೇಂದ್ರ ಸರ್ಕಾರ ಹಿಂದುಮುಂದು ಯೋಚನೆ ಮಾಡುತ್ತದೆ. ಆದರೆ 5 ರಿಂದ 10 ದೊಡ್ಡ ಬಂಡವಾಳಶಾಹಿಗಳಿಗೆ ಲಕ್ಷಾಂತರ ಕೋಟಿ ಸಾಲ ನೀಡಲಾಗಿದೆ. ಬ್ಯಾಂಕುಗಳಿಂದ ಸಾಲ ಪಡೆದ ನೀರವ್ ಮೋದಿ, ವಿಜಯ ಮಲ್ಯನಂತವರು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಈ ಕುರಿತು ಚಕಾರ ಎತ್ತುತ್ತಿಲ್ಲ ಎಂದು ದೂರಿದರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕೇವಲ ದೇಶವಾಸಿಗಳಿಗೆ ಸುಳ್ಳು ಭರವಸೆಗಳನ್ನಷ್ಟೆ ನೀಡಿದ್ದಾರೆ. ಚೈನಾ ದೇಶ ಭಾರತದ ಗಡಿಯಲ್ಲಿ ರಸ್ತೆ ಅಭಿವೃದ್ದಿ, ಮೂಲ ಸೌಕರ್ಯ ಅಭಿವೃದ್ದಿಪಡಿಸುತ್ತಿದ್ದರೆ, 54 ಇಂಚು ದೇಹ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಕೈಕಟ್ಟಿಕೊಂಡು ಕುಳಿತಿದ್ದಾರೆ. ದಲಿತರು, ಆದಿವಾಸಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೆ ಕೇಂದ್ರ ಸರ್ಕಾರ ಕೈಚೆಲ್ಲಿ ಕುಳಿತಿದೆ ಎಂದು ಆಪಾದಿಸಿದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಮನಸ್ಸು ಬೇಕು. ಪ್ರತಿಯೊಬ್ಬರಲ್ಲೂ ಪ್ರೀತಿ ತೋರಬೇಕು. ಏಕತೆ ಕಾಪಾಡಿಕೊಂಡು ಹೋಗಬೇಕು. ಆಗ ಮಾತ್ರ ಭಾರತ ಸದೃಢವಾಗಿ ಬೆಳೆಯುತ್ತದೆ ಎಂದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...