alex Certify
ಕನ್ನಡ ದುನಿಯಾ       Mobile App
       

Kannada Duniya

ಊರು ಬಿಟ್ಟಿದ್ದಾರೆ ಈ ಗ್ರಾಮದ ಗಂಡಸರು..!

Padmenahalli Ph3

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಪದ್ಮೇನಹಳ್ಳಿ ಗ್ರಾಮದಲ್ಲಿನ ಗಂಡಸರೆಲ್ಲಾ ಊರು ಬಿಟ್ಟಿದ್ದಾರೆ. ತಮ್ಮ ವಿರುದ್ಧ ಕೇಸು ದಾಖಲಾಗಿದ್ದು, ಬಂಧನಕ್ಕೊಳಗಾಗಬಹುದೆಂಬ ಭೀತಿಯಲ್ಲಿ ಇಡೀ ಗ್ರಾಮದ ಗಂಡಸರೆಲ್ಲಾ ಕಳೆದ 6 ದಿನಗಳಿಂದ ಊರು ಬಿಟ್ಟಿದ್ದು, ಎಲ್ಲೆಲ್ಲಿಯೋ ನೆಲೆ ಕಂಡುಕೊಂಡಿದ್ದಾರೆ.

ಫೆ.10 ರಂದು ರಾತ್ರಿ ಮಾಚೇನಹಳ್ಳಿ ಬಳಿ ನಡೆದ ಅಪಘಾತ ಪ್ರಕರಣವೇ ಗ್ರಾಮದ ಪುರುಷರೆಲ್ಲಾ ಊರು ಬಿಡಲು ಕಾರಣ. ಅಂದು ರಾತ್ರಿ 10 ಗಂಟೆ ಸುಮಾರಿಗೆ ಶಿವಮೊಗ್ಗ- ಭದ್ರಾವತಿ ಮಾರ್ಗದ ಮಾಚೇನಹಳ್ಳಿ ಡೈರಿ ಎದುರು ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಜುನಾಥ್ (25) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ.

ಅಪಘಾತದಲ್ಲಿ ಮಂಜುನಾಥ್ ಸಾವನ್ನಪ್ಪಿದ್ದರಿಂದ ಸ್ಥಳದಲ್ಲಿದ್ದ ನೂರಾರು ಮಂದಿ ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ ಉದ್ರಿಕ್ತರ ಗುಂಪು ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಬೆಂಕಿ ಹಚ್ಚಿ, ಮತ್ತೆರಡು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ, ಗಾಜುಗಳನ್ನು ಪುಡಿಗೊಳಿಸಿತ್ತು.

ಕೂಡಲೇ ಸ್ಥಳಕ್ಕೆ ಧಾವಿಸಿದ್ದ ತುಂಗಾನಗರ ಠಾಣೆ ಪೊಲೀಸರು ಉದ್ರಿಕ್ತರ ಗುಂಪನ್ನು ಚದುರಿಸಿದ್ದರು. ಅಲ್ಲದೇ, ಘಟನೆಯ ವಿಡಿಯೋ ಚಿತ್ರೀಕರಿಸಿದ್ದರು. ಇದರ ಆಧಾರದ ಮೇಲೆ ಸುಮಾರು 50-60 ಜನರ ವಿರುದ್ಧ ಎಫ್ಐಆರ್ ದಾಖಲಿಸಿ, ಪದ್ಮೇನಹಳ್ಳಿಯ ಮಂಜುನಾಥ್ ಎಂಬಾತನನ್ನು ಬಂಧಿಸಿದ್ದರು.

ಅಪಘಾತದಲ್ಲಿ ಮೃತಪಟ್ಟಿದ್ದ ಯುವಕ ಮಂಜುನಾಥ್ ಸಹ ಪದ್ಮೇನಹಳ್ಳಿಯ ಗ್ರಾಮದ ನಿವಾಸಿಯಾಗಿದ್ದು, ಪದ್ಮೇನಹಳ್ಳಿಯ ಗ್ರಾಮಸ್ಥರೇ ಬಸ್ ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಆದರೆ, ಗ್ರಾಮಕ್ಕೂ ಅಪಘಾತ ನಡೆದ ಸ್ಥಳಕ್ಕೂ ಸುಮಾರು 6 ಕಿ.ಮೀ. ದೂರವಿದ್ದು, ಘಟನೆ ನಡೆದ ತಕ್ಷಣವೇ ಗ್ರಾಮಸ್ಥರು ಅಲ್ಲಿಗೆ ಹೋಗಿ ಬಸ್ ಗೆ ಬೆಂಕಿ ಹಚ್ಚಲು ಸಾಧ್ಯವಿಲ್ಲ ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗದವರನ್ನೂ ಕೂಡ ಆರೋಪಿಗಳನ್ನಾಗಿ ಮಾಡಿದ್ದಾರೆ. ಇದರಿಂದಾಗಿ ನಮ್ಮ ಗ್ರಾಮದ ಗಂಡಸರೆಲ್ಲಾ ಬಂಧನದ ಭೀತಿಯಿಂದ ಊರು ಬಿಟ್ಟಿದ್ದು, ಇಡೀ ಊರು ಭಯದ ವಾತಾವರಣದಲ್ಲಿದೆ ಎನ್ನುತ್ತಾರೆ ಗ್ರಾಮದಲ್ಲಿ ಇರುವ ಮಹಿಳೆಯರು.

ಚುನಾವಣೆಗೂ ಬರಲಿಲ್ಲ: ಬಸ್ ಗೆ ಬೆಂಕಿ ಹಚ್ಚಿದ ಘಟನೆಯಿಂದಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಗ್ರಾಮದ ಗಂಡಸರು ಫೆ.13 ರಂದು ನಡೆದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನದಲ್ಲೂ ಪಾಲ್ಗೊಳ್ಳಲಿಲ್ಲ. ಹಾಗಾಗಿ ಗ್ರಾಮದಲ್ಲಿ 450 ಕ್ಕೂ ಹೆಚ್ಚು ಮತಗಳಿದ್ದರೂ ಚಲಾವಣೆಯಾಗಿದ್ದು ಕೇವಲ 200 ಮಾತ್ರ. ಅವು ಹೆಂಗಸರು ಮತ್ತು ವಯೋವೃದ್ಧ ನಾಗರೀಕರದ್ದು. ಗಂಡಸರೆಲ್ಲಾ ಊರು ಬಿಟ್ಟಿದ್ದರಿಂದ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.

ಆತಂಕದ ವಾತಾವರಣ: ಈ ಗ್ರಾಮ ಮಾಚೇನಹಳ್ಳಿಯಿಂದ 6 ಕಿ.ಮೀ. ದೂರವಿದ್ದು, ಯಾವುದೇ ಬಸ್ ಸೌಲಭ್ಯವಿಲ್ಲ. ಮಕ್ಕಳು ವಿದ್ಯಾಭ್ಯಾಸಕ್ಕೆ ಭದ್ರಾವತಿ, ಶಿವಮೊಗ್ಗಕ್ಕೆ ಬರಬೇಕು. ಆದರೆ, ಗ್ರಾಮದಲ್ಲಿ ಗಂಡಸರೇ ಇಲ್ಲದಿರುವುದರಿಂದ ಮಕ್ಕಳು ಶಾಲೆಗೆ ಹೋಗಲೂ ಹಿಂಜರಿಯುತ್ತಿದ್ದಾರೆ. ಇದರಿಂದ ಮಹಿಳೆಯರು ಇನ್ನಷ್ಟು ಆತಂಕಗೊಂಡಿದ್ದಾರೆ.

ಅಪಘಾತಗಳು ಸಾಮಾನ್ಯ. ಹಾಗೆಯೇ ಪ್ರತಿಭಟನೆಗಳನ್ನು ಕೂಡ ನಾವು ಕಾಣುತ್ತೇವೆ. ಪ್ರತಿಭಟನೆಯ ಸಮಯದಲ್ಲಿ ಆವೇಶದಲ್ಲಿ ಕೆಲವರು ಮಾಡಿದ ತಪ್ಪಿಗಾಗಿ ಇಡೀ ಊರಿನ ಗಂಡಸರು ಊರು ತೊರೆಯುವಂತಾಗಿರುವುದು ಸರಿಯಲ್ಲ. ಪೊಲೀಸರು ಈ ಬಗ್ಗೆ ಗ್ರಾಮಕ್ಕೆ ತೆರಳಿ ಮೊದಲು ಭಯವನ್ನು ಹೋಗಲಾಡಿಸಬೇಕು. ಬಸ್ ಗೆ ಬೆಂಕಿ ಹಚ್ಚಿದವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಆದರೆ, ಎಲ್ಲರ ಮೇಲೆಯೂ ವಿನಾಕಾರಣ ಕೇಸು ದಾಖಲಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವುದು ಕೆಲವರ ವಾದ. ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಬಡವರು ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯರ ಮನವಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...