alex Certify
ಕನ್ನಡ ದುನಿಯಾ       Mobile App
       

Kannada Duniya

‘ಶ್ರೀಗಳ ಹೇಳಿಕೆ ತಿರುಚಿದ್ದರೆ ನನ್ನ ಕುಟುಂಬ ನಾಶವಾಗಲಿ’

ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ತುಮಕೂರು ಸಿದ್ಧಗಂಗಾ ಮಠದ ಶ್ರೀಗಳು ಬೆಂಬಲ ನೀಡಿದ್ದಾರೆ ಎಂಬುದು ನಿಜ. ನಾನು ನೀಡಿರುವ ಹೇಳಿಕೆ ಸುಳ್ಳಾಗಿದ್ದರೆ, ಕುಟುಂಬದವರೊಂದಿಗೆ ಮಠಕ್ಕೆ ತೆರಳಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಸಿದ್ಧಗಂಗಾ ಶ್ರೀಗಳು ಬೆಂಬಲ ನೀಡಿದ ನಂತರವೇ ನಾನು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದೆ. ಆದರೆ, ಯಡಿಯೂರಪ್ಪ ಮತ್ತು ಸೋಮಣ್ಣ ಸೇರಿದಂತೆ ಕೆಲವರು ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನ ನಡೆಸಿದ್ದಾರೆ ಎಂದು ವಿಜಯಪುರದಲ್ಲಿ ಆರೋಪಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಶ್ರೀಗಳು ಬೆಂಬಲಿಸಿದ್ದಾರೆ ಎಂದು ಎಂ.ಬಿ. ಪಾಟೀಲ್ ಹೇಳಿದ ನಂತರ, ಶ್ರೀಗಳು ಹಾಗೇ ಹೇಳಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಲಿಂಗಾಯತರು, ನಗರದಲ್ಲಿ ವೀರಶೈವರು ಎಂದು ಕರೆಯಲಾಗುತ್ತದೆ. ಎರಡೂ ಒಂದೇ ಎಂದು ಶ್ರೀಗಳು ಹೇಳಿದ್ದಾಗಿ ಮಠದ ಮೂಲಗಳು ತಿಳಿಸಿದ್ದವು.

ಬಿ.ಎಸ್. ಯಡಿಯೂರಪ್ಪ, ಶ್ರೀಗಳು ಏನು ಹೇಳಿದ್ದಾರೆ ಎಂಬುದು ಎರಡೇ ದಿನದಲ್ಲಿ ಗೊತ್ತಾಗಲಿದೆ ಎಂದು ಪಾಟೀಲ್ ಗೆ ತಿರುಗೇಟು ನೀಡಿದ್ದರು.

ಈ ಬೆಳವಣಿಗೆಗಳ ಬೆನ್ನಲ್ಲೇ ಇಂದು ವಿಜಯಪುರದಲ್ಲಿ ಮಾತನಾಡಿದ ಎಂ.ಬಿ. ಪಾಟೀಲ್, ನಾನು ಶ್ರೀಗಳು ಬೆಂಬಲ ನೀಡಿರುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಈಗಲೂ ಬದ್ಧನಾಗಿದ್ದೇನೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸ್ವಾಮೀಜಿ ಬೆಂಬಲಿಸಿದ್ದಾರೆ. ಆದರೂ ಕೆಲವರು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದ್ದಾರೆ.

ನಾನು ನೀಡಿರುವ ಹೇಳಿಕೆ ಸುಳ್ಳಾಗಿದ್ದರೆ, ಮಠಕ್ಕೆ ತೆರಳಿ ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಮಾಣ ಮಾಡುತ್ತೇನೆ. ಸುಳ್ಳಾಗಿದ್ದರೆ, ಶ್ರೀಗಳ ಶಾಪದಿಂದ ನನ್ನ ಕುಟುಂಬ ನಾಶವಾಗಲಿ. ಲಿಂಗಾಯತ ಧರ್ಮಕ್ಕೆ ಶ್ರೀಗಳು ಬೆಂಬಲ ನೀಡಿರುವುದು ನಿಜ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...