alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗದಲ್ಲಿ ಅದ್ದೂರಿ ಮಾರಿಜಾತ್ರೆಗೆ ಚಾಲನೆ

ಶಿವಮೊಗ್ಗ ನಗರ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಇಂದು ಬೆಳಗಿನ ಜಾವ ಚಾಲನೆ ದೊರೆತಿದೆ. ಇಂದಿನಿಂದ 5 ದಿನಗಳ ಕಾಲ ವೈಭವದಿಂದ ಮಾರಿಕಾಂಬ ದೇವಿ ಜಾತ್ರೆ ನಡೆಯಲಿದ್ದು, ಅಪಾರ ಸಂಖ್ಯೆ ಭಕ್ತರು ಬೆಳಿಗ್ಗೆಯಿಂದಲೇ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.

ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯ ಆಡಳಿತ ಮಂಡಳಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ 2 ವರ್ಷಗಳಿಗೊಮ್ಮೆ ನಗರದಲ್ಲಿ ಅದ್ದೂರಿಯಾಗಿ ನಡೆಯುವ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಮೊಗ್ಗ ನಗರ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ಶ್ರೀ ಮಾರಿಕಾಂಬ ದೇವಿಯ ತವರು ಮನೆ ಗಾಂಧಿಬಜಾರಿನಲ್ಲಿ ದೇವಿಯನ್ನು ಸ್ಥಾಪಿಸಿದ್ದು, ಬಿ.ಬಿ. ರಸ್ತೆಯಲ್ಲಿನ ಬ್ರಾಹ್ಮಣರ ಸಮಾಜದ ನಾಡಿಗರ ಕುಟುಂಬದವರು ಮೊದಲ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವ ಆರಂಭಗೊಂಡಿತು. ದೇವಿಯ ದರ್ಶನಕ್ಕೆ ಆಗಮಿಸಿದ ಸಾವಿರಾರು ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು.

ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಲಾಗಿದ್ದು, ಸಮಿತಿಯ ಪ್ರಮುಖರು, ಸ್ವಯಂ ಸೇವಕರು ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಗಾಂಧಿ ಬಜಾರ್ ಹಾಗೂ ಮಾರಿಕಾಂಬ ದೇವಾಲಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಬೆಳಿಗ್ಗೆಯಿಂದಲೇ ದೇವಿಯ ದರ್ಶನಕ್ಕೆ ಜನರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ಮಧ್ಯಾಹ್ನದ ವೇಳೆಗೆ ಜನದಟ್ಟಣೆ ಹೆಚ್ಚಾಗುತ್ತಿದ್ದು, ಸರತಿ ಸಾಲು ಬಿ. ಹೆಚ್. ರಸ್ತೆಯ ಚರ್ಚ್ ವರೆಗೂ ಬೆಳೆದಿತ್ತು.  ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಭಕ್ತರಿಗೆ ಆಯಾಸವಾಗದಂತೆ ಸರತಿ ಸಾಲಿನುದ್ದಕ್ಕೂ ಶಾಮಿಯಾನ ಹಾಕಲಾಗಿತ್ತಾದರೂ ಸರತಿ ಸಾಲು ಶಾಮಿಯಾನದಿಂದಾಚೇ ಇದ್ದುದ್ದರಿಂದ ಜನತೆ ಬಿಸಿಲನ್ನೂ ಲೆಕ್ಕಿಸದೆ ದೇವಿಯ ದರ್ಶನ ಮಾಡಲು ಮುಂದಾಗಿದ್ದರು.
ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ನೀರು, ಮಜ್ಜಿಗೆ ನೀಡುವ ವ್ಯವಸ್ಥೆಯನ್ನು ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಮತ್ತು ಸಂಘ-ಸಂಸ್ಥೆಗಳವರು ಮಾಡಿದ್ದರು.

ಮಂಗಳವಾರ ರಾತ್ರಿ 10 ಗಂಟೆಯವರೆಗೂ ನಾಗರೀಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ನಂತರ ಉಪ್ಪಾರ ಸಮಾಜದವರು ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯ ಮೂಲಕ ಕೋಟೆ ರಸ್ತೆಯಲ್ಲಿರುವ ಮಾರಿ ಗದ್ದುಗೆಯವರೆಗೂ ತರಲಿದ್ದಾರೆ. ಆಗ ದೇವಿಯನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಮತಸ್ಥ ಸಮಾಜದವರು ಪೂಜೆ ಸಲ್ಲಿಸಲಿದ್ದಾರೆ.

ಫೆ.21 ರ ಬೆಳಿಗ್ಗೆ 4 ಗಂಟೆಗೆ ಹರಿಜನ ಸಮಾಜದವರು ಬೇವಿನ ಉಡಿಗೆಯೊಂದಿಗೆ ಪೂಜೆ ಸಲ್ಲಿಸಿದ ನಂತರ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಕುರುಬ, ಉಪ್ಪಾರ, ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ. ಫೆ.24ರ ಶನಿವಾರ ರಾತ್ರಿ 9 ಗಂಟೆಗೆ ಮಾರಿಕಾಂಬೆಯನ್ನು ವನಪ್ರವೇಶಕ್ಕೆ ಕಳುಹಿಸಿಕೊಡುವ ಕಾರ್ಯಕ್ರಮವಿರುತ್ತದೆ. ಆ ದಿನ ಉತ್ಸವ ನಡೆಯಲಿದ್ದು, ವಿವಿಧ ಜಾನಪದ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...