alex Certify
ಕನ್ನಡ ದುನಿಯಾ       Mobile App
       

Kannada Duniya

ದೇವೇಗೌಡ-ಕುಮಾರಸ್ವಾಮಿ ದೇಶದ ಅತಿ ದೊಡ್ಡ ಸಮಯಸಾಧಕ ರಾಜಕಾರಣಿಗಳು: ಯಡಿಯೂರಪ್ಪ

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ದೇಶದ ಅತಿದೊಡ್ಡ ಸಮಯಸಾಧಕ ರಾಜಕಾರಣಿಗಳು ಎಂದು ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜೆಡಿಎಸ್ ಕೋರ್ ಕಮಿಟಿ ಎಂದರೆ ಅದು ಅಪ್ಪ-ಮಕ್ಕಳು ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂದು ಕೇಳುವ ಮೂಲಕ ಕುಮಾರಸ್ವಾಮಿಯವರು ರೈತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಅದಕ್ಕೆ ಕ್ಷಮೆ ಕೇಳುವ ಬದಲು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಓಡಾಡುತ್ತಿದ್ದಾರೆಂದು ಕಿಡಿ ಕಾರಿದ್ದಾರೆ.

ಮಂತ್ರಿ ಸ್ಥಾನ ಕೇಳಲು ತಾವು ದೇವೇಗೌಡರ ಮನೆಗೆ ಹೋಗಿದ್ದಾಗಿ ಹೇಳುತ್ತಿರುವ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪನವರು, ರಾಮಕೃಷ್ಣ ಹೆಗಡೆಯವರಿಗೆ ಚಪ್ಪಲಿಯಲ್ಲಿ ಹೊಡೆಸಿದ್ದು ಯಾರು ಎಂದು ಪ್ರಶ್ನಿಸಿದರಲ್ಲದೆ ಆ ಬಳಿಕ ರಾಮಕೃಷ್ಣ ಹೆಗಡೆಯವರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಇದೇ ದೇವೇಗೌಡರು ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಎಷ್ಟು ಮಂದಿ ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು ಅವರೇ ಹೇಳಬೇಕು ಎಂದ ಯಡಿಯೂರಪ್ಪನವರು, ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ಕಬ್ಬಿಗೆ ಯಾವ ಬೆಲೆ ನೀಡುತ್ತಿದೆ ಎಂಬುದನ್ನು ಕುಮಾರಸ್ವಾಮಿಯವರು ತಿಳಿದುಕೊಳ್ಳಲಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಪ್ಪ- ಮಕ್ಕಳು ಅಪಮಾನ ಮಾಡಿದರೂ ಅದನ್ನು ಅವರು ಸಹಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲವು ಸಾಧಿಸದಿದ್ದರೆ ಅವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಹೇಳಿದ ಯಡಿಯೂರಪ್ಪನವರು, ಸೂಕ್ತ ಸಮಯಕ್ಕಾಗಿ ಸಿದ್ದರಾಮಯ್ಯ ಕಾಯುತ್ತಿರಬಹುದು ಎಂದರು.

ರೈತ ಮಹಿಳೆ ಕುರಿತು ಅಪಮಾನಕಾರಿ ಹೇಳಿಕೆ ನೀಡಿರುವ ಕುರಿತು ಹಾಗೂ ರೈತರ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ವಿಫಲವಾಗಿರುವ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಕೈಗೊಳ್ಳುವುದಾಗಿ ಯಡಿಯೂರಪ್ಪನವರು ತಿಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...