alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರೆದುರು ತಮ್ಮ ಕುಕೃತ್ಯವನ್ನು ತೆರೆದಿಟ್ಟ ಹಂತಕರು

ರಿಯಲ್ ಎಸ್ಟೇಟ್‌ ಉದ್ಯಮಿಗಳಾಗಿದ್ದ ಪ್ರಸಾದ್‌ ಬಾಬು ಹಾಗೂ ಬಾಲಾಜಿ ಅವರ ಅಪಹರಣ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ತಮ್ಮಕುಕೃತ್ಯವನ್ನು ಪೊಲೀಸರೆದುರು ಬಾಯ್ಬಿಟ್ಟಿದ್ದಾರೆ.

ಉದ್ಯಮಿಗಳನ್ನು ಅಪಹರಿಸಿದ್ದ ತೇಜಸ್ ರಾಜು ಹಾಗೂ ಮಣಿಕಂಠ, ಜೂನ್ 27ರಂದು ಅವಲಹಳ್ಳಿಯ ಗೋದಾಮಿಗೆ ಕರೆದೊಯ್ದು ಉದ್ಯಮಿಗಳ ಉಸಿರುಗಟ್ಟಿಸಿ ಕೊಂದಿದ್ದರು. ಶವಗಳನ್ನು ಕಾರಿನಲ್ಲಿಟ್ಟುಕೊಂಡು ಹಾರೋಹಳ್ಳಿಯಲ್ಲಿರುವ ತೇಜಸ್‌ ಒಡೆತನದ ಫಾರ್ಮ್‌ಹೌಸ್‌ಗೆ ತೆಗೆದುಕೊಂಡು ಹೋಗಿದ್ದರು.

ಅಲ್ಲಿಂದ 1 ಕಿ.ಮೀ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಯಲಚೇನಹಳ್ಳಿಯ ಪರಿಚಯಸ್ಥರೊಬ್ಬರ ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಸಿದ್ದರು. ಅದರ ಕೆಳಭಾಗದಲ್ಲಿ ಕಟ್ಟಿಗೆಗಳನ್ನು ಹೊಂದಿಸಿ, ಶವಗಳನ್ನು ಇಟ್ಟು ಅವುಗಳ ಮೇಲೆ ಪುನಃ ಕಟ್ಟಿಗೆಗಳನ್ನು ಇರಿಸಿ 20 ಲೀಟರ್ ಪೆಟ್ರೋಲ್ ಹಾಗೂ ಸಕ್ಕರೆಯನ್ನು ಸುರಿದು ಬೆಂಕಿ ಹಚ್ಚಿದ್ದರು.

ಶವಗಳು ಪೂರ್ತಿಯಾಗಿ ಸುಡುವವರೆಗೂ ಆರೋಪಿಗಳು ಸ್ಥಳದಲ್ಲಿದ್ದರು. ನಸುಕಿನಲ್ಲಿ ಬೆಂಕಿಯ ಜ್ವಾಲೆ ಕಡಿಮೆಯಾದ ಬಳಿಕ ಗುಂಡಿಯೊಳಗೆ ಮಣ್ಣು ಹಾಕಿ ಮುಚ್ಚಿದ್ದರು. ಶವಗಳನ್ನು ಸುಟ್ಟ ನಂತರ ತೇಜಸ್‌ ಹಾಗೂ ಆತನ ಸಹಚರರು, ತಮಗೇನು ಗೊತ್ತೇ ಇಲ್ಲ ಎಂಬಂತೆ ಓಡಾಡುತ್ತಿದ್ದರು. ಪ್ರಸಾದ್ ಬಾಬು ನಾಪತ್ತೆ ಬಗ್ಗೆ ಅವರ ಪತ್ನಿ ಅನಿತಾ ನೀಡಿದ್ದ ದೂರಿನಡಿ ರಾಜರಾಜೇಶ್ವರಿ ನಗರ ಪೊಲೀಸರು, ತೇಜಸ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು.

‘ನಾನು ಅಮಾಯಕ’ ಎಂದು ಆತ ಹೇಳಿಕೊಂಡಿದ್ದರಿಂದ ಬಿಟ್ಟು ಕಳುಹಿಸಿದ್ದರು. ಆದರೆ ಮತ್ತೊಬ್ಬ ಉದ್ಯಮಿ ಬಾಲಾಜಿ ನಾಪತ್ತೆ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು, ಸಿಸಿ ಟಿ.ವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದರು. ಉದ್ಯಮಿ ಮನೆ ಹಾಗೂ ತೇಜಸ್‌ನ ಕಚೇರಿ ಸುತ್ತಮುತ್ತ ಆರೋಪಿ ಅನಿಲ್‌ ಹಲವು ಬಾರಿ ಓಡಾಡಿದ್ದು ಗೊತ್ತಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಕೊಲೆ ರಹಸ್ಯ ಹೊರಬಂದಿತ್ತು.

ಈ ಹಿನ್ನಲೆಯಲ್ಲಿ ದಕ್ಷಿಣ ವಿಭಾಗ ಪೊಲೀಸರು ಆರೋಪಿಗಳನ್ನು ಹಾರೋಹಳ್ಳಿಗೆ ಬಳಿ ಉದ್ಯಮಿಗಳನ್ನು ಕೊಂದು ಹೂತ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಶವ ಹೂತಿಟ್ಟ ಜಾಗವನ್ನು ಜೆಸಿಬಿ ಯಂತ್ರದಿಂದ ಹೊರತೆಗೆದಿದ್ದು, ಅದರಲ್ಲಿ ತಲೆಬುರುಡೆ ಹಾಗೂ ಅಸ್ಥಿ ಪಂಜರಗಳು ಸಿಕ್ಕಿವೆ. ತಲೆ ಬುರುಡೆ ಹಾಗೂ ಅಸ್ಥಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಆರೋಪಿ ತೇಜಸ್‌, ಪ್ರಸಾದ್ ಬಾಬು ಹಾಗೂ ಬಾಲಾಜಿ ಜತೆ ಸೇರಿ ಪಾಲುದಾರಿಕೆಯಲ್ಲಿ ಕಟ್ಟಡ ನಿರ್ಮಿಸುವ ಕೆಲಸ ಮಾಡುತ್ತಿದ್ದ. ಅದೇ ಪರಿಚಯದಿಂದಾಗಿ ಅವರಿಬ್ಬರಿಂದ 60 ಲಕ್ಷ ಸಾಲವನ್ನೂ ಪಡೆದಿದ್ದ. ಅದನ್ನು ಮರುಪಾವತಿಸುವಂತೆ ಕೇಳಿದ್ದರಿಂದಾಗಿ ಆರೋಪಿ, ತನ್ನ ಸಹಚರರ ಜತೆ ಸೇರಿ ಉದ್ಯಮಿಗಳನ್ನು ಅಪಹರಿಸಿ ಹತ್ಯೆ ಮಾಡಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...