alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಫಲಿತಾಂಶ: ರಾಜ್ಯದಲ್ಲಿ ಹೇಗಿರುತ್ತೆ ಪರಿಣಾಮ..?

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಮುನ್ನಡೆ ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್ ನಲ್ಲಿ ಬಿ.ಜೆ.ಪಿ. ಗೆಲುವಿಗೆ ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸಲಾಗಿತ್ತು.

ಈ ಗೆಲುವು ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರಲು ಈಗಾಗಲೇ ಕಾರ್ಯತಂತ್ರ ರೂಪಿಸಿವೆ.

ಈಗಾಗಲೇ ರಾಜ್ಯಾದ್ಯಂತ ಪ್ರಚಾರ ಆರಂಭಿಸಿರುವ ಮೂರೂ ಪಕ್ಷಗಳ ನಾಯಕರು ಚುನಾವಣೆಯ ತಯಾರಿ ನಡೆಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್ ಸೋಲು ಕಂಡಿದ್ದರೆ, ಗುಜರಾತ್ ನಲ್ಲಿ ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿ.ಜೆ.ಪಿ. ಅಧಿಕಾರ ಉಳಿಸಿಕೊಳ್ಳುವತ್ತ ಸಾಗುವಲ್ಲಿ ಯಶಸ್ವಿಯಾಗಿದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಆಡಳಿತ ವಿರೋಧಿ ಅಲೆ ಪರಿಣಾಮ ಬೀರಿದಂತೆ ಕರ್ನಾಟಕದಲ್ಲಿಯೂ ಪರಿಣಾಮ ಬೀರಬಹುದೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಹೇಳಲಾಗದು. ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ರಾಜಕೀಯ ಚಿತ್ರಣ ಬೇರೆ ರೀತಿಯಾದುದು. ಹಿಮಾಚಲ ಪ್ರದೇಶದಲ್ಲಿ 5 ವರ್ಷಗಳಿಗೊಮ್ಮೆ ಸರ್ಕಾರ ಬದಲಾಗಿದೆ. 6 ಸಲ ಮುಖ್ಯಮಂತ್ರಿಯಾಗಿರುವ ವೀರಭದ್ರಸಿಂಗ್ ಅವರೇ ಆಡಳಿತ ವಿರೋಧಿ ಅಲೆಯಿಂದ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಸಾಧ್ಯವಾಗಿಲ್ಲ.

ಎರಡೂ ರಾಜ್ಯಗಳಲ್ಲಿ ಮುನ್ನಡೆ ಗಳಿಸಿರುವುದರಿಂದ ಕರ್ನಾಟಕದಲ್ಲಿಯೂ ಬಿ.ಜೆ.ಪಿ. ಅಧಿಕಾರಕ್ಕೆ ಬರಲಿದೆ ಎಂಬುದು ಪಕ್ಷದ ನಾಯಕರ ಸಹಜವಾದ ವಿಶ್ವಾಸವಾಗಿದೆ. ಆದರೆ, ಕಾಂಗ್ರೆಸ್, ಜೆ.ಡಿ.ಎಸ್. ನಾಯಕರು ಇದನ್ನು ಒಪ್ಪುವುದಿಲ್ಲ. ತಮ್ಮ ಪಕ್ಷಗಳೇ ಅಧಿಕಾರಕ್ಕೆ ಬರಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಇದು ಸಹಜ ಕೂಡ. ಕರ್ನಾಟಕದ ರಾಜಕೀಯವೇ ಬೇರೆ ರೀತಿಯಾದುದು.

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ನಡುವೆ ನೇರ ಹಣಾಹಣಿ ಕಂಡು ಬಂದಿದ್ದರೆ, ಕರ್ನಾಟಕದಲ್ಲಿ 3 ಪಕ್ಷಗಳು ಪ್ರಮುಖವಾಗಿವೆ. ಕಾಂಗ್ರೆಸ್, ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ರಾಜ್ಯದಲ್ಲಿ ಪ್ರಮುಖ ಪಕ್ಷಗಳಾಗಿದ್ದು, ಚುನಾವಣೆ ವೇಳೆ ನಡೆಯುವ ಪಕ್ಷಾಂತರ, ರಾಜಕೀಯ ದೃವೀಕರಣ, ಮತದಾರರ ಮನಸ್ಥಿತಿ ಪರಿಣಾಮ ಬೀರಲಿದೆ. ಚುನಾವಣೆಗೆ ಇನ್ನೂ ಹಲವು ತಿಂಗಳುಗಳಿದ್ದು, ಆ ವೇಳೆಗೆ ಮತದಾರರ ನಿರ್ಧಾರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...