alex Certify
ಕನ್ನಡ ದುನಿಯಾ       Mobile App
       

Kannada Duniya

ರೆಸಾರ್ಟ್ ಗೆ ವಾಸ್ತವ್ಯ ಬದಲಾಯಿಸಿದ ಜೆಡಿಎಸ್ ಶಾಸಕರು

ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸಬಹುದೆಂಬ ಅನುಮಾನದ ಹಿನ್ನಲೆಯಲ್ಲಿ ಜೆಡಿಎಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಬಹುಮತ ಸಾಬೀತುಪಡಿಸುವವರೆಗೂ ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದು, ಲಿ ಮೆರಿಡಿಯನ್ ಹೋಟೆಲ್ ನಲ್ಲಿದ್ದ ಶಾಸಕರು ಇದೀಗ ನಂದಿ ಬೆಟ್ಟದ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಶಾಸಕರುಗಳ ವಾಸ್ತವ್ಯಕ್ಕಾಗಿ 30 ರೂಮ್ ಗಳನ್ನು ಬುಕ್ ಮಾಡಲಾಗಿದ್ದು, ಶಾಸಕರುಗಳು ಈಗಾಗಲೇ ರೆಸಾರ್ಟ್ ತಲುಪಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಈ ಶಾಸಕರುಗಳು ಮೊದಲು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿದ್ದು, ಬಳಿಕ ಹೈದರಾಬಾದ್ ನ ತಾಜ್ ಕೃಷ್ಣಾಕ್ಕೆ ತೆರಳಿದ್ದರು.

ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಮೇ 19 ರಂದು ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದ ಹಿನ್ನಲೆಯಲ್ಲಿ ಮರುದಿನವೇ ಹೈದರಾಬಾದ್ ನಿಂದ ಆಗಮಿಸಿದ್ದ ಈ ಶಾಸಕರುಗಳು, ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ನೇರವಾಗಿ ವಿಧಾನಸೌಧಕ್ಕೆ ತೆರಳಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ತಮಗೆ ಬಹುಮತ ಲಭಿಸುವುದು ಕಷ್ಟ ಎಂಬ ಕಾರಣಕ್ಕೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ವಿಶ್ವಾಸಮತ ಯಾಚನೆಗೂ ಮುನ್ನವೇ ರಾಜ್ಯಪಾಲ ವಜೂಭಾಯ್ ವಾಲಾರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಕಾಂಗ್ರೆಸ್ ಬೆಂಬಲ ನೀಡಿದ ಕಾರಣಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿದ್ದಾರೆ.

ಬುಧವಾರದಂದು ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಲಿದ್ದು, ಅಂದೇ ಅಥವಾ ಮರುದಿನ ವಿಶ್ವಾಸಮತ ಯಾಚಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿಯವರೆಗೂ ಶಾಸಕರುಗಳನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ. ಹೀಗಾಗಿ ಪ್ರೆಸ್ಟೀಜ್ ಗಾಲ್ಫ್ ಶೈರ್ ನಲ್ಲಿ ಶಾಸಕರುಗಳ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾಂಗ್ರೆಸ್ ವರಿಷ್ಟರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿರುವ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಅದಕ್ಕೂ ಮುನ್ನ ರೆಸಾರ್ಟ್ ಗೆ ಭೇಟಿ ನೀಡಿ ಶಾಸಕರ ಸಭೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...