alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿಗೆ ಮುಳುವಾಗಲಿದೆಯಾ ‘ಆ’ ಮೂವರ ಸಮಾಗಮ

ಮೇ 12 ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಮೇ 15 ರಂದು ಹೊರ ಬಿದ್ದಿದ್ದು, ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೆ ಅತಂತ್ರ ಸ್ಥಿತಿ ತಲೆದೋರಿರುವ ಹಿನ್ನಲೆಯಲ್ಲಿ ಅಧಿಕಾರಕ್ಕಾಗಿ ರಾಜ್ಯದಲ್ಲಿ ಹೈಡ್ರಾಮವೇ ನಡೆದಿದೆ.

ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಹೊಂದಿದ್ದರೂ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೇರಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ, ತರಾತುರಿಯಲ್ಲಿ ಜೆಡಿಎಸ್ ಗೆ ತನ್ನ ಬೆಂಬಲ ಘೋಷಿಸಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆಂದೇ ಭಾವಿಸಲಾಗಿತ್ತು.

ಆದರೆ ಯಾವಾಗ ರಾಜ್ಯಪಾಲ ವಜೂಭಾಯ್ ವಾಲಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದರೋ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಆಕ್ರೋಶಗೊಂಡರಲ್ಲದೇ ಚುನಾವಣೆಯಲ್ಲಿ ಪರಸ್ಪರ ಭಾರೀ ಟೀಕೆ ಮಾಡಿದ್ದವರು ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಉಭಯ ಪಕ್ಷಗಳ ಶಾಸಕರನ್ನು ಬಹುಮತ ಸಾಬೀತುಪಡಿಸುವ ದಿನಾಂಕದವರೆಗೂ ಸಂರಕ್ಷಿಸಿಟ್ಟುಕೊಳ್ಳಲು ಮುಂದಾಗಿದ್ದಾರೆ.

ರಾಜಕಾರಣದಲ್ಲಿ ಬದ್ದ ವೈರಿಗಳಾಗಿದ್ದ ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ ಈ ವಿಚಾರದಲ್ಲಿ ಕೈಜೋಡಿಸಿರುವುದಲ್ಲದೇ ಬಿಜೆಪಿಯ ಕೆಲ ಶಾಸಕರನ್ನೇ ತಮ್ಮತ್ತ ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆನ್ನಲಾಗಿದೆ. ಅಲ್ಲದೇ ಕುಮಾರಸ್ವಾಮಿಯವರ ಒಂದು ಕಾಲದ ಮಿತ್ರ ಈಗ ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಖಾನ್ ಕೂಡಾ ಇವರಿಬ್ಬರಿಗೆ ಜೊತೆಯಾಗಿದ್ದಾರೆ.

ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ಖಾನ್ ಈ ಹಿಂದೆಯೂ ಶಾಸಕರನ್ನು ರೆಸಾರ್ಟ್ ನಲ್ಲಿಟ್ಟು ಯಾವ ಶಾಸಕರನ್ನು ಬೇರೆ ಪಕ್ಷದವರು ಸೆಳೆಯದಂತೆ ಕಾಪಾಡಿಕೊಂಡಿರುವ ಅನುಭವ ಹೊಂದಿದ್ದರೆ, ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಶಾಸಕರನ್ನು ಡಿ.ಕೆ. ಶಿವಕುಮಾರ್ ರಾಜ್ಯದ ರೆಸಾರ್ಟ್ ನಲ್ಲಿ ಚುನಾವಣೆ ದಿನಾಂಕದವರೆಗೂ ಕಾದಿಟ್ಟುಕೊಂಡಿದ್ದರು. ಇದೀಗ ಈ ಮೂವರೂ ಒಂದಾಗಿರುವುದು ಬಿಜೆಪಿ ಪಾಳೆಯದ ತಲೆನೋವಿಗೆ ಕಾರಣವಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತಿರುವುದು ಶಾಸಕರನ್ನು ತಮ್ಮತ್ತ ಸೆಳೆಯುವ ಕಾರ್ಯಕ್ಕೆ ಹಿನ್ನಡೆಯಾಗಬಹುದೆಂಬ ಆತಂಕ ಬಿಜೆಪಿಯವರನ್ನು ಕಾಡುತ್ತಿದೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅಂತಿಮ ಜಯ ಯಾರಿಗೆ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...