alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಮುಂಡೇಶ್ವರಿಯಲ್ಲಿ ಸೋಲನುಭವಿಸುತ್ತಾರಂತೆ ಸಿದ್ದರಾಮಯ್ಯ, ಸೋಲುಣಿಸುವವರ್ಯಾರಂತೆ ಗೊತ್ತಾ?

ಶಿವಮೊಗ್ಗ : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲನುಭವಿಸುವುದು ಖಚಿತ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಕೂಡ ನಿರ್ನಾಮವಾಗಲಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಜಿ.ಪರಮೇಶ್ವರ್ ಹೀಗೆ ಪಕ್ಷದಲ್ಲಿ ಎಷ್ಟು ಗುಂಪುಗಳಿವೆ ಎಂಬುದು ಬಹಿರಂಗವಾಗಿದೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ವಿಫಲರಾಗಿ ನಿರಾಶರಾಗಿದ್ಧಾರೆ. ಸ್ವತಃ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಅವರಿಗೂ ಪಕ್ಷದ ವಿರೋಧಿ ಗುಂಪುಗಳಿಂದ ಕೇವಲ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಆದೇಶವಾಗಿದೆ. ಈ ಮುಖಭಂಗ ಇಷ್ಟಕ್ಕೆ ನಿಲ್ಲುವುದಿಲ್ಲ. ಕಳೆದ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ರನ್ನು ಸೋಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಈ ಬಾರಿ ಕಾಂಗ್ರೆಸ್ ನಲ್ಲಿನ ವಿರೋಧಿ ಗುಂಪು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸೋಲುಣಿಸಲಿದೆ ಎಂದರು.

ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಶಿಷ್ಯಂದಿರು ಹಾಗೂ ಅವರ ಪತ್ನಿಯರೇ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯರ ಪ್ರತಿಕೃತಿಯನ್ನು ಬೇರೆ ಪಕ್ಷದವರಿರಲಿ, ಕಾಂಗ್ರೆಸ್ ಪಕ್ಷದವರೇ ದಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿಲ್ಲ ಎಂದು ಸಿದ್ದರಾಮಯ್ಯರನ್ನು ಕರೆತಂದು ಮುಖ್ಯಮಂತ್ರಿ ಸ್ಥಾನವನ್ನು ನೀಡಲಾಯಿತು. ಆದರೆ ಸರ್ವಾಧಿಕಾರಿಯಂತೆ ಕಾಂಗ್ರೆಸ್ ಪಕ್ಷದಲ್ಲೂ ನಡೆದುಕೊಂಡರು. ಇದು ಆ ಪಕ್ಷದ ಹಲವು ನಾಯಕರಲ್ಲಿ ಬೇಸರವುಂಟು ಮಾಡಿತ್ತು. ಇದೀಗ ಕಾಂಗ್ರೆಸ್ ಗುಂಪುಗಾರಿಕೆ ಬಹಿರಂಗಗೊಂಡಿದೆ ಎಂದರು.
ಈಗಾಗಲೇ ದೇಶದ 21 ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. 22ನೇ ರಾಜ್ಯ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲು ಅನುಭವಿಸುವುದು ಖಚಿತ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಾಗ ಅಲ್ಲೊಂದು ಇಲ್ಲೊಂದು ವ್ಯಕ್ತಿಗಳು ಅತೃಪ್ತಗೊಂಡಿದ್ದನ್ನೇ ದೊಡ್ಡದು ಮಾಡಿ ಕಾಂಗ್ರೆಸ್ ನವರು ಬಿಜೆಪಿ ಕುರಿತು ಆರೋಪ ಮಾಡಿದ್ದರು. ಗೊಂದಲ ಶಮನ ಮಾಡುವಲ್ಲಿ ಬಿಜೆಪಿ ಸಂಪೂರ್ಣ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಅತೃಪ್ತಿ ಯಾವ ಹಂತಕ್ಕೆ ತಲುಪುತ್ತದೆ ಕಾದು ನೋಡಬೇಕು ಎಂದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...