alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯುದಾಗಾರಕ್ಕೆ ಬೆಂಕಿ: ದುರಸ್ತಿಗೆ ಬೇಕು 6 ತಿಂಗಳು

benki 2

ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಸಂಭವಿಸಿದ ಬೆಂಕಿ ದುರಂತದ ಹಿನ್ನೆಲೆಯಲ್ಲಿ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೇಬಲ್ ಸಂಪೂರ್ಣ ಹಾಳಾಗಿದ್ದು, ಅದರ ಪುನರ್ ನಿರ್ಮಾಣಕ್ಕೆ ಸುಮಾರು 8 ರಿಂದ 10 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ವಿದ್ಯುತ್ ಉತ್ಪಾದನೆ ಆರಂಭವಾಗಲು ಕನಿಷ್ಠ 6 ತಿಂಗಳ ಕಾಲಾವಕಾಶ ಹಿಡಿಯುತ್ತದೆ ಎಂದು ಹೇಳಲಾಗಿದೆ.

ಪ್ರತಿ ನಿತ್ಯ ಸುಮಾರು 10 ರಿಂದ 12 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಇದೀಗ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಜಲಾಶಯದಲ್ಲಿ ಶೇ.40 ರಷ್ಟು ನೀರು ಉಳಿಸಿಕೊಳ್ಳಲಾಗಿದೆ. ಶರಾವತಿ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲು ಇನ್ನೂ 6 ತಿಂಗಳು ಆಗುವುದರಿಂದ ಅಷ್ಟರಲ್ಲಿ ಮಳೆಗಾಲ ಆರಂಭವಾಗಿರುತ್ತದೆ. ನಿತ್ಯ 10 ರಿಂದ 12 ದಶಲಕ್ಷ ಯುನಿಟ್ ಉತ್ಪಾದನೆ ಸ್ಥಗಿತವಾಗಿರುವುದರಿಂದ ಇಷ್ಟು ಪ್ರಮಾಣದ ವಿದ್ಯುತ್ ನ್ನು ದುಬಾರಿ ದರದಲ್ಲಿ ಖರೀದಿಸಬೇಕಿದೆ.

ಘಟನೆಯ ವಿವರ: ಶರಾವತಿ ವಿದ್ಯುದಾಗಾರದ ಎ.ಬಿ.ಸೈಟ್ ನಲ್ಲಿ ನಿನ್ನೆ ಸಂಜೆ ಸುಮಾರು 4-30 ರ ಸಮಯದಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದ ಕ್ಷಣಕಾಲ ಇಡೀ ಪ್ರದೇಶ ಹೊಗೆಯಿಂದ ಆವರಿಸಿತ್ತು.

ನಾಡಿಗೆ ಅತಿ ಹೆಚ್ಚು ವಿದ್ಯುತ್ ಪೂರೈಕೆ ಮಾಡುವ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎ.ಬಿ.ಸೈಟ್ ಅಂದರೆ ಆನೆಬೈಲ್ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಗುರುವಾರ ಮಧ್ಯಾಹ್ನ ವಿದ್ಯುತ್ ಉತ್ಪಾದಿಸಿ ಸರಬರಾಜು ಮಾಡುವ ವಿದ್ಯುತ್ ಉತ್ಪಾದನಾ ನಿಯಂತ್ರಣ ಕೊಠಡಿ ಕಂಟ್ರೋಲ್ ರೂಂ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.

ಬೇಸಿಗೆಯಲ್ಲಿ ವಿದ್ಯುತ್ ನಿರಂತರ ಉತ್ಪಾದನೆ ಮಾಡುವ ಉದ್ದೇಶದಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದ್ದರೂ ಮುಂದಿನ ದಿನಗಳಲ್ಲಿನ ವಿದ್ಯುತ್ ಅಭಾವವನ್ನು ತಡೆಯುವ ಉದ್ದೇಶದಿಂದ ಉತ್ಪಾದನೆಯಲ್ಲಿಯೂ ನಿಯಂತ್ರಣ ಮಾಡುತ್ತಿರುವ ಕಾರಣ ನಿಗದಿತ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರು.

ಎಲ್ಲಾ ವಿದ್ಯುತ್ ಉತ್ಪಾದನೆಗಳಿಗಿಂತ ಜಲ ವಿದ್ಯುತ್ ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅಗ್ನಿ ಅನಾಹುತದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡ ಪರಿಣಾಮ ಕೋಟ್ಯಾಂತರ ರೂ. ಗಳ ನಷ್ಟ ಅನುಭವಿಸುವ ಜೊತೆಗೆ ವಿದ್ಯುತ್ ಉತ್ಪಾದನಾ ನಿಯಂತ್ರಣ ಕೊಠಡಿ ಬೆಂಕಿಗೆ ಆಹುತಿಯಾಗಿರುವ ಕಾರಣ ಹಲವು ಕೋಟಿ ನಷ್ಟವಾಗುವ ಸಾಧ್ಯತೆಯಿದೆ.

ತಜ್ಞರು ಆಗಮಿಸಿ ಪರಿಶೀಲಿಸಿದ ನಂತರ ಅಗ್ನಿ ಅನಾಹುತದ ಕಾರಣಗಳು ಮತ್ತು ಅಗ್ನಿಯಿಂದ ಉಂಟಾದ ನಷ್ಟಗಳ ಕುರಿತು ಮಾಹಿತಿ ದೊರೆಯಲಿದೆ. ಸಮರೋಪಾದಿಯಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರದ ದುರಸ್ಥಿ ಕಾರ್ಯ ಕೈಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...