alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿಗೆ 50 ಸ್ಥಾನ ಲಭಿಸುವ ಗ್ಯಾರಂಟಿಯೂ ಇಲ್ಲ-ಡಿಕೆಶಿ

ಶಿವಮೊಗ್ಗ : ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು ರಾಜ್ಯದ ಪ್ರತಿಯೊಬ್ಬ ಜನರಿಗೂ ಇಂಧನ ಇಲಾಖೆ ಉತ್ತಮವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂಬ ಸಮಾಧಾನ ತಂದಿದೆ ಎಂದು ಇಂಧನ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಮೆಗ್ಘಾನ್ ಆಸ್ಪತ್ರೆ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಶಿವಮೊಗ್ಗ ವಲಯ ಕಚೇರಿ ಮತ್ತು ಇತರ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಸೂಚಿಸಿದಾಗ ಹಲವು ಸ್ನೇಹಿತರು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳುವುದು ಬೇಡ, ನಿರಂತರವಾಗಿ ಜನರಿಗೆ ವಿದ್ಯುತ್ ನೀಡುವುದಕ್ಕೆ ಆಗುವುದಿಲ್ಲ. ಬರಗಾಲವಿದೆ ಎಂದು ಸಲಹೆ ನೀಡಿದ್ದರು. ಹೆದರಿಕೊಂಡು ಓಡಿಹೋಗುವ ಜಾಯಮಾನ ತಮ್ಮದಲ್ಲ. ಹೀಗಾಗಿ ಜವಾಬ್ದಾರಿಯನ್ನು ವಹಿಸಿಕೊಂಡೆ. ಹಲವು ಕಷ್ಟಗಳ ನಡುವೆಯೂ ರಾಜ್ಯದ ಜನತೆಗೆ ವಿದ್ಯುತ್ ನೀಡಿರುವ ತೃಪ್ತಿ ಇದೆ ಎಂದರು.

ಪಾವಗಡದಲ್ಲಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಪ್ಲ್ಯಾಂಟನ್ನು 13 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರಿ ಭೂಮಿ ಇದ್ದರೆ ಘಟಕ ಸ್ಥಾಪನೆ ಮಾಡಬಹುದು. ಆದರೆ ರೈತರು ಜಮೀನು ಖರೀದಿ ಮಾಡದೇ ಅವರನ್ನು ವಿಶ್ವಾಸಕ್ಕೆ ಪಡೆದು ಸೋಲಾರ್ ವಿದ್ಯುತ್ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ರಾಜ್ಯ ಸರ್ಕಾರಕ್ಕೆ ಹೆಮ್ಮೆ ತರುವ ಕೆಲಸವಾಗಿದೆ ಎಂದರು.

ರಾಜ್ಯದ 105 ತಾಲ್ಲೂಕುಗಳಲ್ಲಿ ತಲಾ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಪ್ಲ್ಯಾಂಟ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಉತ್ಪಾದನೆಯಾಗುವ ವಿದ್ಯುತ್ ನ್ನು ಆಯಾ ತಾಲ್ಲೂಕಿನ ರೈತರಿಗೆ ಹಾಗೂ ಗ್ರಾಹಕರಿಗೆ ನೀಡಲಾಗುವುದು. ಪ್ರಧಾನಿ ಕೂಡ ಯೋಜನೆ ಕುರಿತು ಆಸಕ್ತಿ ತೋರಿದ್ದಾರೆ. ಅಧಿಕಾರಿಗಳಿಗೆ ಇಂತಹ ಘಟಕಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದ್ಧಾರೆ ಎಂದು ತಿಳಿಸಿದರು.

ಗ್ರಾಹಕರಿಗೆ ಹಾಗೂ ಅಧಿಕಾರಿಗಳಿಗೆ ಸಂಪರ್ಕ ಇರಬೇಕು. ಅಧಿಕಾರಿಗಳು ಗ್ರಾಹಕರಿಗೆ ಹತ್ತಿರವಾದರೆ ಇಲಾಖೆಯಲ್ಲಿನ ಕೆಲಸಗಳು ಸುಗಮವಾಗಿ ಸಾಗುತ್ತದೆ. ಹೀಗಾಗಿ ಇಲಾಖೆ ಯಲ್ಲಿನ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದ್ದೇನೆ. ತಾವು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ 23 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನು 17 ಸಾವಿರ ಹುದ್ದೆ ಖಾಲಿ ಉಳಿದಿದ್ದು ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಇಲಾಖೆ ನೌಕರರ ವೇತನವನ್ನು ಶೇ.26ರಷ್ಟು ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ ಎಂದರು.

ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದರು. ಅವರು ಪ್ರಬಲ ನಾಯಕರು. ಇಂಧನ ಇಲಾಖೆ ಸರಿಯಾಗಿ ಸಾಗದಿದ್ದರೆ ಪ್ರಶ್ನೆ ಮಾಡುತ್ತಿದ್ದರು. ಆಡಳಿತ ಸರಿ ಇಲ್ಲ ಎಂದು ವಿಧಾನಮಂಡಲದಲ್ಲಿ ಆಕ್ರೋಶ ತೋರುತ್ತಿದ್ದರು. ಆದರೆ ಇಲಾಖೆ ಕುರಿತಾಗಿ ಒಂದೇ ಒಂದು ಮಾತನ್ನು ಇದುವರೆಗೂ ಆಡಿಲ್ಲ. ಇದಕ್ಕಿಂತ ಹೇಗೆ ಅಭಿನಂದನೆ ಸಲ್ಲಿಸಲು ಸಾಧ್ಯ ಎಂದು ಹೇಳಿದರು.

ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿಯ ಮಹಾಪರ್ವವೇ ನಡೆದಿದೆ. ನೀರಾವರಿ, ರಸ್ತೆಗಳು ಅಭಿವೃದ್ದಿ ಕಂಡಿವೆ, ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾದ ನಂತರ ಕಂದಾಯ ಹಾಗೂ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಜನರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಜೊತೆಗೆ ಎಲ್ಲ ಇಲಾಖೆಗಳಲ್ಲೂ ಅಭಿವೃದ್ದಿ ಕಾರ್ಯ ಸಾಗಿದೆ ಎಂದರು.

ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲಿದೆ. ರಾಜ್ಯದ ಜನತೆ ಸರ್ಕಾರದ ಕೆಲಸವನ್ನು ಗುರುತಿಸಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಈ ಹಿಂದೆ ರಾಜ್ಯದ ಜನತೆ ಅಧಿಕಾರ ನೀಡಿದ್ದರು. ಆದರೆ ಐದು ವರ್ಷ ಹೇಗೆ ಅಧಿಕಾರ ನೀಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಅವರು ವಿಪಕ್ಷ ನಾಯಕರಾಗಿ ಕೆಲಸ ಮಾಡಲು ಹಕ್ಕಿದೆ. ಅದನ್ನು ಮಾಡಲಿ ಎಂದು ಲೇವಡಿ ಮಾಡಿದರು.

ಪ್ರಧಾನಿ ರಾಜ್ಯ ಭೇಟಿ ಸಂದರ್ಭದಲ್ಲಿ ಅವರ ಹೇಳಿಕೆ ಗಮನಿಸಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ನಿಚ್ಚಳವಾದಂತಿದೆ. 150 ಸ್ಥಾನವಲ್ಲ, 50 ಸ್ಥಾನ ಬರುವುದು ಗ್ಯಾರಂಟಿ ಇಲ್ಲವಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ದ ಪ್ರಧಾನಿ ಹೇಳಿಕೆ ನೀಡತೊಡಗಿದ್ದಾರೆ ಎಂದು ವ್ಯಂಗ್ಯವಾಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...