alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.ಕೆ. ಶಿವಕುಮಾರ್ ಗೆ ಅವಕಾಶ ತಪ್ಪಲು ಕಾರಣವೇನು?

dks-dks

ಮುಂದಿನ ವಿಧಾನಸಭೆ ಚುನಾವಣೆಗೆ ಮೂರೂ ಪಕ್ಷಗಳು ಈಗಾಗಲೇ ಮೈಕೊಡವಿ ನಿಂತಿವೆ. ಕಾಂಗ್ರೆಸ್, ಬಿ.ಜೆ.ಪಿ., ಜೆ.ಡಿ.ಎಸ್. ಚುನಾವಣೆಯನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿದ್ದು, ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿವೆ.

ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇನ್ನು ಜೆ.ಡಿ.ಎಸ್.ನಿಂದ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೇರಲು ತಯಾರಿ ನಡೆಸಿದ್ದಾರೆ.

ಆಡಳಿತ ಪಕ್ಷ ಕಾಂಗ್ರೆಸ್ ಕೂಡ ಮುಂದಿನ ಅವಧಿಗೂ ಅಧಿಕಾರ ರಚಿಸಲು ಕಾರ್ಯೋನ್ಮುಖವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್ ಗೆ ಹೊಸ ಉಸ್ತುವಾರಿಯಾಗಿ ಕೆ.ಸಿ. ವೇಣುಗೋಪಾಲ್ ಅವರನ್ನು ನೇಮಕ ಮಾಡಿದೆ. ಇದರೊಂದಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಪರಮೇಶ್ವರ್ ಬದಲಿಗೆ ಬೇರೆಯವರನ್ನು ನೇಮಕ ಮಾಡಲಾಗುವುದೆಂದು ಹೇಳಲಾಗಿತ್ತು.

ಎಂ.ಬಿ. ಪಾಟೀಲ್, ಎಸ್.ಆರ್. ಪಾಟೀಲ್, ಡಿ.ಕೆ.ಶಿವಕುಮಾರ್ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಮತ್ತೊಂದು ಮಾಹಿತಿಯಂತೆ ಹಾಲಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನೇ ಮುಂದುವರೆಸುವ ಕುರಿತು ಚರ್ಚೆ ನಡೆದಿತ್ತು.

ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಅಳೆದು ತೂಗಿದ ಬಳಿಕ ಡಿ.ಕೆ. ಶಿವಕುಮಾರ್ ಹಾಗೂ ಪರಮೇಶ್ವರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ನಿರ್ಧರಿಸಿ, ಕೊನೆಗೆ ಪರಮೇಶ್ವರ್ ಅವರನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ.

ಚುನಾವಣೆ ಹತ್ತಿರದಲ್ಲಿರುವಾಗ ದಲಿತ ಸಮುದಾಯಕ್ಕೆ ಸೇರಿದವರನ್ನು ಬದಲಿಸಿದರೆ, ದೊಡ್ಡ ಸಮುದಾಯ ದೂರವಾಗಬಹುದೆಂಬ ಆಲೋಚನೆ ಇದರ ಹಿಂದಿದೆ. ಇನ್ನು ರಾಜ್ಯದ ಪ್ರಭಾವಿ ಸಮುದಾಯಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಚಾರ ಸಮಿತಿಯ ಉಸ್ತುವಾರಿ ಜೊತೆಗೆ, ಗೃಹ ಖಾತೆಯ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ನಡೆದ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಗೆಲುವಿಗೆ ರಣತಂತ್ರ ರೂಪಿಸುವ ಕಲೆ ಅವರಿಗೆ ಗೊತ್ತಿದ್ದರಿಂದ ಸವಾಲಾಗಿದ್ದ ಉಪ ಚುನಾವಣೆಯನ್ನು ಕಾಂಗ್ರೆಸ್ ಸುಲಭವಾಗಿ ಜಯಿಸಿತ್ತು.

ಇದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಹಿಂದೆಯೇ ಹೇಳಲಾಗಿತ್ತು. ಆದರೆ, ಅವರಿಗೆ ಅವಕಾಶ ತಪ್ಪಿದೆ. ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದರೆ ತಮ್ಮ ಹಿಡಿತ ತಪ್ಪುತ್ತದೆ ಎಂಬ ಕಾರಣಕ್ಕೆ ರಾಜ್ಯದ ಕೆಲ ನಾಯಕರೇ ಅವಕಾಶ ತಪ್ಪಿಸಿದ್ದಾರೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...