alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಟೀಲದ್ವಯರ ಸಚಿವ ಸ್ಥಾನ ತಪ್ಪಲು ಕಾರಣವಾಯಿತಾ ಸಿದ್ದು ಪರ ನಿಷ್ಠೆ…?

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ಕೊನೆಗೂ ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಸ್ಥಾನ ಕುರಿತಂತೆ ನಡೆದಿದ್ದ ಹಗ್ಗ ಜಗ್ಗಾಟ ಅಂತ್ಯಗೊಂಡು ಇಂದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರಾದರು ಅವಕಾಶ ವಂಚಿತರು ತೀವ್ರ ಆಕ್ರೋಶಗೊಂಡಿದ್ದಾರೆ.

ಸಚಿವ ಸ್ಥಾನ ವಂಚಿತರ ಬೆಂಬಲಿಗರು ಇಂದು ಪ್ರತಿಭಟನೆ ನಡೆಸಿದ್ದು, ಪಕ್ಷದ ವರಿಷ್ಠ ಮಂಡಳಿ ವಿರುದ್ಧ ಸಿಡಿದು ನಿಂತಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ನಿವಾಸದ ಮುಂದೆ ಹೈ ಡ್ರಾಮಾವೇ ನಡೆದಿದ್ದು, ಅವರ ಬೆಂಬಲಿಗರೊಬ್ಬರು ವಿಷ ಸೇವಿಸಲು ಮುಂದಾದ ಘಟನೆಯೂ ನಡೆದಿದೆ.

ಇದಕ್ಕೂ ಮುನ್ನ ತಮಗೆ ಸಚಿವ ಸ್ಥಾನ ಕೈ ತಪ್ಪುತ್ತದೆ ಎಂಬುದನ್ನು ಮನಗಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿನ ನೆಪವೊಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಸ್.ಆರ್. ಪಾಟೀಲ್ ಹಾಗೂ ಎಂ.ಬಿ. ಪಾಟೀಲ್ ಅವರಿಗೆ ಸಚಿವ ಸ್ಥಾನ ತಪ್ಪಲು ಅವರುಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ನಿಷ್ಠೆ ವ್ಯಕ್ತಪಡಿಸಿದ್ದೇ ಕಾರಣ ಎಂಬ ಮಾತುಗಳು ಈಗ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಮೈತ್ರಿಕೂಟದ ಸರ್ಕಾರದಲ್ಲಿ ಕಾಂಗ್ರೆಸ್ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಕೈ ಮೇಲಾಗಿದ್ದು, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಡೆಗಣಿಸಿದ್ದ ಸೇಡನ್ನು ಈಗ ತೀರಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಪರಮೇಶ್ವರ್ ಅವರನ್ನು ಮುಂದಿಟ್ಟುಕೊಂಡು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ತಮ್ಮ ದಾಳವನ್ನು ಉರುಳಿಸುತ್ತಿದ್ದು, ತಮ್ಮ ರಾಜಕೀಯ ಕಡು ವೈರಿ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...