alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ. ಡೈರಿ- ಕಾಂಗ್ರೆಸ್ ಸಿ.ಡಿ.: ಬಯಲಾಯ್ತು ಬಣ್ಣ

bjp-cong-d

ಬೆಂಗಳೂರು: ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ನಾಯಕರ ನಡುವೆ, ಕಳೆದೆರಡು ದಿನಗಳಿಂದ ಆರೋಪ, ಪ್ರತ್ಯಾರೋಪ ನಡೆಯುತ್ತಿದ್ದು, ರಾಜಕಾರಣಿಗಳ ಬಣ್ಣ ಬಯಲು ಮಾಡಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಗೆ 1000 ಕೋಟಿ ರೂ. ಕೊಟ್ಟಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಎಂ.ಎಲ್.ಸಿ. ಗೋವಿಂದರಾಜ್ ಡೈರಿಯಲ್ಲಿ ಈ ಬಗ್ಗೆ ದಾಖಲಾಗಿದೆ. ಸಿದ್ಧರಾಮಯ್ಯ ಹೈಕಮಾಂಡ್ ಗೆ ಹಣ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ 65 ಕೋಟಿ ರೂ. ಕಮಿಷನ್ ಪಡೆದಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡುವಂತೆ ಕಾಂಗ್ರೆಸ್ ಸಿ.ಡಿ.ಯೊಂದನ್ನು ಬಿಡುಗಡೆ ಮಾಡಿದೆ. ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿ.ಜೆ.ಪಿ. ಸಭೆಯಲ್ಲಿ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ, ಹೈಕಮಾಂಡ್ ಗೆ ಹಣ ಸಲ್ಲಿಸುವ ವಿಚಾರದ ಬಗ್ಗೆ ಚರ್ಚೆ ಆಗಿದೆ.

ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕುಳಿತಿದ್ದ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ನಡೆದ ಮಾತುಕತೆ ಬಹಿರಂಗವಾಗಿದೆ.

ನೀವಿದ್ದಾಗಲೂ ಕೇಂದ್ರಕ್ಕೆ ದುಡ್ಡು ಕೊಟ್ಟಿದ್ದೀರಿ ಎಂದು ಅನಂತ್ ಕುಮಾರ್ ಹೇಳಿದ್ದು, ಕೊಟ್ಟಿದ್ದನ್ನೆಲ್ಲ ಡೈರಿಯಲ್ಲಿ ಬರೆದಿಡ್ತಾರಾ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈ ಸಿ.ಡಿ.ಯನ್ನು ಬಿಡುಗಡೆ ಮಾಡುತ್ತಲೇ ಅಲ್ಲೋಲಕಲ್ಲೋಲ ಶುರುವಾಗಿದೆ. ಅಷ್ಟಕ್ಕೂ, ಬಿ.ಜೆ.ಪಿ. ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರ ನಡುವೆ ನಡೆದ ಸಂಭಾಷಣೆ ಸಿ.ಡಿ.ಯನ್ನು ಕಾಂಗ್ರೆಸ್ ಮುಖಂಡರಿಗೆ ಕೊಟ್ಟಿದ್ದು, ಬಿ.ಜೆ.ಪಿ. ನಾಯಕರೇ ಎಂಬುದಂತೂ ನಿಜ.

ಸಿ.ಡಿ. ಕೊಟ್ಟಿದ್ದು, ಬಿ.ಜೆ.ಪಿ.ಯವರೇ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದು, ಬಿ.ಜೆ.ಪಿ.ಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಿಂಬಿಸುವಂತಿದೆ.

ಬಿ.ಎಸ್.ವೈ.ಗೆ ಮೂಗುದಾರ ಹಾಕಲು ಪ್ರಭಾವಿ ನಾಯಕರೊಬ್ಬರು, ಬಿ.ಜೆ.ಪಿ. ಸಭೆಯಲ್ಲಿ ನಡೆದ ಮಾತುಕತೆಯ ಸಿ.ಡಿ.ಯನ್ನು ಕಾಂಗ್ರೆಸ್ ಮುಖಂಡರಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಸಿ.ಎಂ. ವಿರುದ್ಧ 1000 ಕೋಟಿ ರೂ. ಬಾಂಬ್ ಎಸೆದ ಯಡಿಯೂರಪ್ಪನವರಿಗೆ ಉರುಳಾಗುವ ರೀತಿ ತಂತ್ರ ಎಣೆಯಲಾಗಿದೆ ಎಂದು ಹೇಳಲಾಗುತ್ತದೆ.

ಬಿ.ಜೆ.ಪಿ. ಡೈರಿ ಮತ್ತು ಕಾಂಗ್ರೆಸ್ ಸಿ.ಡಿ.ಯಿಂದಾಗಿ ಆರೋಪ, ಪ್ರತ್ಯಾರೋಪಗಳು ಮತ್ತೆ ಜೋರಾಗತೊಡಗಿವೆ. ಇದು ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...