alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ್ ಬಂದ್ ಗೆ ವ್ಯಾಪಕ ಬೆಂಬಲ: ಬಸ್ ಸಂಚಾರ ಸ್ಥಗಿತ-ಕೆಲವೆಡೆ ಕಲ್ಲು ತೂರಾಟ

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಹಾಗೂ ಬಿಎಂಟಿಸಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳು ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿವೆ. 10 ಗಂಟೆ ಬಳಿಕ ಬಂದ್ ಬಿಸಿ, ಪ್ರತಿಭಟನೆಗಳು ಇನ್ನಷ್ಟು ಕಾವೇರಲಿದೆ.

ಭಾರತ್ ಬಂದ್ ಹಿನ್ನಲೆ ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದ್ದಾರೆ. ಪ್ರಮುಖ ರಸ್ತೆಗಳಿಗೆ ಹೋಗಿ ಬಂದ್​ಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತ‌ಗೊಂಡಿದ್ದು, ಕೆಎಸ್​ಆರ್​ಟಿಸಿ ಬಸ್​ಗಳು ಮತ್ತು ಖಾಸಗಿ ಬಸ್​ಗಳು ರಸ್ತೆಗಿಳಿದಿಲ್ಲ. ಹೋಟೆಲ್, ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾರತ್ ಬಂದ್ ‌ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕೆಎಸ್​​ಆರ್‌ಟಿಸಿಯ‌ ಎರಡು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಮೇಲೆ ಮಂಗಳೂರಿನ ಬಿ.ಸಿ. ರೋಡ್​​ನಲ್ಲಿ ಕಲ್ಲು ತೂರಾಟ ನಡೆದಿದ್ದು, ಯಾರೂ ಕೂಡ ಬಲವಂತದಿಂದ ಬಂದ್ ಮಾಡುವಂತೆ ಒತ್ತಾಯಿಸುವಂತಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಳ್ಳಾರಿ ಶಾಸಕ ನಾಗೇಂದ್ರ ಕುದುರೆ ಮೇಲೆ ಕುಳಿತು ವಿನೂತನ ಪ್ರತಿಭಟನೆ ನಡೆಸುವ ಮೂಲಕ ರೈಲು ನಿಲ್ದಾಣದಿಂದ ರಾಯಲ್ ವೃತ್ತದವರೆಗೆ ಬಂದು, ಪೆಟ್ರೋಲ್-ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಹುಬ್ಬಳ್ಳಿಯಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕೆಲ ಸಂಘಟನೆಗಳು ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಲು ಮುಂದಾದಾಗ ರೈಲ್ವೆ ಸಿಬ್ಬಂದಿಗಳು ಅವರನ್ನು ತಡೆದ ಘಟನೆ ನಡೆದಿದೆ. ಇನ್ನೊಂದೆಡೆ ಪಾರ್ಸಲ್ ಕಛೇರಿಗೆ ನುಗ್ಗಿದ ಪ್ರತಿಭಟನಾಕಾರರು ಕಚೇರಿ ಮುಚ್ಚುವಂತೆ ಒತ್ತಾಯಿಸಿದ್ದಾರೆ. ಈ ನಡುವೆ ಪ್ರತಿಭಟನಾಕಾರರು ಹಾಗೂ ಕಛೇರಿ ಸಿಬ್ಬಂದಿ ನಡುವೆ ವಾಗ್ವಾದ ನಡೆದು ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಒಟ್ಟಾರೆ ರಾಜ್ಯಾದ್ಯಂತ ಭಾರತ್ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಮಧ್ಯಾಹ್ನದ ವೇಳೆಗೆ ಬಂದ್ ಹಾಗೂ ಪ್ರತಿಭಟನೆಗಳು ಇನ್ನಷ್ಟು ಕಾವೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...