alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಒಳ ಜಗಳ

ಶಿವಮೊಗ್ಗ: ಬಿಜೆಪಿಯಲ್ಲಿನ ಒಳಜಗಳ ಮತ್ತೆ ಭುಗಿಲೇಳುವ ಲಕ್ಷಣ ಗೋಚರಿಸಿದೆ. ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ತಮಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿರುವುದನ್ನು ನಿರಾಕರಿಸಿದ್ದಾರೆ.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮನ್ನು ರಾಜ್ಯ ಉಪಾಧ್ಯಕ್ಷ ಎಂದು ಘೋಷಣೆ ಮಾಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆ ಹುದ್ದೆಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ದೇಶದ ಹಿತ ಮೊದಲು ಎನ್ನುವುದನ್ನು ಪಕ್ಷ ಹೇಳಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಗೊಂದಲ ಹುಟ್ಟುಹಾಕಬಾರದು ಎಂಬ ಕಾರಣಕ್ಕೆ ಹಾಗೂ ರಾಜ್ಯಾಧ್ಯಕ್ಷರಿಗೆ ಗೌರವ ನೀಡುವ ಸಲುವಾಗಿ ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಅಭ್ಯರ್ಥಿ ಬಿ.ವೈ. ರಾಘವೇಂದ್ರರ ಗೆಲುವಿಗೆ ಪ್ರಾಮಾಣಿಕವಾಗಿ ಕೈಜೋಡಿಸಿದ್ದೇನೆ ಎಂದರು.

`ಪಕ್ಷ ಸಂಘಟನೆ ಉಳಿಸೋಣ ಬನ್ನಿ’ ಹೆಸರಿನಲ್ಲಿ ಸಭೆ ನಡೆಸಿದಾಗ ತಮ್ಮನ್ನು ಸೇರಿದಂತೆ ಕೆಲವರನ್ನು ಪಕ್ಷದ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆದರೆ ಇದೀಗ ತಮಗೆ ಪಕ್ಷದ ಉಪಾಧ್ಯಕ್ಷ ಸ್ಥಾನ ನೀಡಿ ರಾಜ್ಯಾಧ್ಯಕ್ಷರು ಘೋಷಣೆ ಮಾಡಿದ್ದಾರೆ. ಆದರೆ ನನ್ನೊಂದಿಗೆ ಸೊಗಡು ಶಿವಣ್ಣ, ನಂದೀಶ್, ಗಿರೀಶ್ ಪಟೇಲ್, ನಿರ್ಮಲ್ ಕುಮಾರ್ ಸುರಾನ ಇನ್ನು ಹಲವರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ತಮ್ಮ ಆಗ್ರಹವಾಗಿದೆ ಎಂದರು.

ಪಕ್ಷದ ಅವಕೃಪೆಗೆ ಒಳಗಾಗಿರುವವರನ್ನು ಕರೆದು ಮಾತನಾಡಿಸುವ ಕೆಲಸ ರಾಜ್ಯ ನೇತೃತ್ವ ವಹಿಸಿರುವವರಿಂದ ಆಗಬೇಕಿದೆ. ಇದಕ್ಕೆ ರಾಷ್ಟ್ರೀಯ ನಾಯಕತ್ವ ಸೂಕ್ತ ಮಾರ್ಗದರ್ಶನ ನೀಡಬೇಕು. ಅವಕೃಪೆಗೆ ಒಳಗಾಗಿರುವವರನ್ನು ಪಕ್ಷದೊಳಗೆ ಸೇರಿಸಿಕೊಳ್ಳದ ಹೊರತು ತಾವು ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿಯೇ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.

ತಮಗೆ ಉಪಾಧ್ಯಕ್ಷ ಸ್ಥಾನ ನೀಡಿರುವುದು ಏತಕ್ಕೆ ಎಂಬುದನ್ನು ಯಡಿಯೂರಪ್ಪ ಅವರನ್ನೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಕ್ಷದಲ್ಲಿನ ಹಿಂದಿನ ಘಟನೆಯನ್ನು ಮರೆತು ರಾಷ್ಟ್ರ ನಾಯಕರ ಆದೇಶದಂತೆ ಯಡಿಯೂರಪ್ಪರಿಗೆ ಪಕ್ಷದ ರಾಜ್ಯಾದ್ಯಕ್ಷ ಸ್ಥಾನ ನೀಡಿದ್ದಕ್ಕೆ ನಾವ್ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಮೊದಲು ಪಕ್ಷದಿಂದಲೇ ಆಗಬೇಕಿದೆ. ಪಕ್ಷದ ಪ್ರತಿಯೊಬ್ಬರನ್ನು ಜೋಡಿಸಿಕೊಂಡು ಹೋಗುವುದರಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆ. ಇದನ್ನು ಪಕ್ಷದ ನಾಯಕತ್ವ ಮನಗಾಣಬೇಕಿದೆ ಎಂದರು.

ಬೇರೆಯವರಂತೆ ಪಕ್ಷ ಬಿಟ್ಟು ಹೋಗುವುದಿಲ್ಲ. ಹುದ್ದೆಗಾಗಿ ಎಂದೂ ಅಪೇಕ್ಷೆಪಟ್ಟಿಲ್ಲ. ದೇಶದ ಹಿತಕ್ಕಾಗಿ ಹುದ್ದೆ ಇಲ್ಲದೇ ಬಿಜೆಪಿಗೆ ದುಡಿದಿದ್ದೇವೆ. ಮುಂದೆ ಕೂಡ ಪಕ್ಷಕ್ಕಾಗಿ ದುಡಿಯುತ್ತೇವೆ. ಉಪಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಚರ್ಚೆಯಾಗುತ್ತಿದೆ. ಇದರಿಂದ ಯಡಿಯೂರಪ್ಪ ಗೌರವಕ್ಕೆ ಚ್ಯುತಿ ಬರಬಾರದು. ಈ ಕಾರಣಕ್ಕಾಗಿ ವಿಷಯ ತಿಳಿಸಿದ್ದೇನೆ. ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗಬೇಕಾದ ಜವಾಬ್ದಾರಿ ರಾಜ್ಯದ ನೇತೃತ್ವ ವಹಿಸಿಕೊಂಡಿರುವವರಲ್ಲಿದೆ ಎಂದರು.

ರಾಮನಗರದಲ್ಲಿ ಪಕ್ಷದ ಅಭ್ಯರ್ಥಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದು ನಮಗೆ ಎಚ್ಚರಿಕೆ ಘಂಟೆಯಾಗಿದೆ. ಈ ಹಿಂದೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಉದಾಹರಣೆ ಇತ್ತು. ಆದರೆ ಮತದಾನಕ್ಕೂ ಮೊದಲೇ ಅಭ್ಯರ್ಥಿಯು ಬೇರೊಂದು ಪಕ್ಷಕ್ಕೆ ಓಡಿಹೋಗಿದ್ದು ಇದೇ ಮೊದಲ ಬಾರಿಯಾಗಿದೆ. ಇದು ನಮಗೆ ಪಾಠವಾಗಿದೆ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಕನಿಷ್ಟ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದ ಅವರು, 130 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್, ಅಭ್ಯರ್ಥಿಯನ್ನೇ ಕಣಕ್ಕಿಳಿಸದ ಪರಿಸ್ಥಿತಿಗೆ ತಲುಪಿದೆ. ಇನ್ನು ಜೆಡಿಎಸ್ ಅಧಿಕಾರಕ್ಕಾಗಿ ಬೇರೊಬ್ಬರ ಹೆಗಲನ್ನು ಆಶ್ರಯಿಸುತ್ತಿದೆ ಎಂದು ಲೇವಡಿ ಮಾಡಿದರು. ಗೋಷ್ಟಿಯಲ್ಲಿ ಗಿರೀಶ್ ಪಟೇಲ್ ಉಪಸ್ಥಿತರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...