alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಕಾವೇರಿದ ‘ಕಾವೇರಿ’ ಪ್ರತಿಭಟನೆ

download

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ಪ್ರತಿಭಟನೆ ಕಾವೇರುತ್ತಿದೆ. ಮೆಜೆಸ್ಟಿಕ್, ಟೌನ್ ಹಾಲ್, ಸಂಜಯ್ ವೃತ್ತ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ ಸೇರಿದಂತೆ ಬೆಂಗಳೂರಿನ ಎಲ್ಲೆಡೆ ಕನ್ನಡಪರ ಸಂಘಟನೆಗಳು ಬೀದಿಗಿಳಿದಿವೆ.

ಮಾನ್ಯತಾ ಟೆಕ್ ಪಾರ್ಕ್ ಗೆ ಮುತ್ತಿಗೆ ಹಾಕಿದ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಹೊರಗಿನಿಂದ ಬಾಗಿಲು ಹಾಕಿ ಒಳಗೆ ಕೆಲಸ ಮಾಡ್ತಿದ್ದಾರೆಂದು ಆರೋಪಿಸಿರುವ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು, ಕಂಪನಿ ಮೇಲೆ ದಾಳಿ ನಡೆಸಿದ್ದಾರೆ. ಬಂದ್ ಗೆ ಬೆಂಬಲ ನೀಡದ ಐಟಿ ಕಂಪನಿಗಳ ವಿರುದ್ಧ ಕನ್ನಡಪರ ಸಂಘಟನೆಗಳು ಗರಂ ಆಗಿವೆ.

ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಟೌನ್ ಹಾಲ್ ಬಳಿ ಜಯಲಲಿತಾ ತಿಥಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರವೇ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ ಕೂಡ ನಡೆದಿದೆ. ಉರುಳು ಸೇವೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಗಳು ರಸ್ತೆಗಿಳಿದಿಲ್ಲ. ಆಟೋ ಹಾಗೂ ಟ್ಯಾಕ್ಸಿ ಚಾಲಕರು ಬಂದ್ ಗೆ ಬೆಂಬಲ ಸೂಚಿಸಿರುವುದರಿಂದ ಖಾಸಗಿ ವಾಹನ ಬಿಟ್ಟರೆ ಮತ್ಯಾವ ವಾಹನಗಳೂ ರಸ್ತೆಯಲ್ಲಿ ಸಂಚರಿಸುತ್ತಿಲ್ಲ.

ಮೆಜೆಸ್ಟಿಕ್ ಬಳಿ ಟ್ಯಾಕ್ಸಿ ಚಾಲಕನನ್ನು ತಡೆದ ಪ್ರತಿಭಟನಾಕಾರರು ಛೀಮಾರಿ ಹಾಕಿದ್ದಾರೆ. ಕಾರು ಚಲಾಯಿಸದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲಲ್ಲಿ ಸಂಚರಿಸುತ್ತಿದ್ದ ಆಟೋವನ್ನು ತಡೆದು, ಪ್ರತಿಭಟಿಸಿದ್ದಾರೆ. ಶಿವಾಜಿನಗರದಲ್ಲಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿ ಪ್ರತಿಭಟನಾಕಾರರು, ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಸದಾ ಗಿಜಿಗುಡುತ್ತಿದ್ದ ಬೆಂಗಳೂರಿನ ಮಾಲ್ ಗಳು ಬಾಗಿಲು ಮುಚ್ಚಿವೆ. ಜ್ಯುವೆಲರಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಹೊಟೇಲ್ ಬಾಗಿಲು ಕೂಡ ತೆರೆದಿಲ್ಲ. ಮೆಟ್ರೋ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಪೆಟ್ರೋಲ್ ಬಂಕ್ ಗಳು ಕೂಡ ಬಾಗಿಲು ಮುಚ್ಚಿವೆ.

ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ. ವಾಣಿಜ್ಯ ಮಂಡಳಿ ಮುಂದೆ ಜಮಾಯಿಸಿರುವ ನಟರು, ನಿರ್ದೇಶಕರು, ನಿರ್ಮಾಪಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ನಟ ಶಿವರಾಜ್ ಕುಮಾರ್, ದೇವರಾಜ್, ಅನಿರುದ್ದ್, ಉಪೇಂದ್ರ, ಭಾರತೀ ವಿಷ್ಣುವರ್ಧನ್, ಲೀಲಾವತಿ ಸೇರಿದಂತೆ ಅನೇಕ ನಟ- ನಟಿಯರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಸಿನಿಮಾ ಮಂದಿರಗಳು ಕೂಡ ಬಂದ್ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...