alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಎಸ್.ವೈ. ಕಾರ್ಯವೈಖರಿಗೆ ವ್ಯಕ್ತವಾಯ್ತು ಆಕ್ಷೇಪ

bjp-letr

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರವಾಗಿ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನಡುವೆ ಸಂಘರ್ಷ ಏರ್ಪಟ್ಟಿದೆ.

ಇದೇ ವಿಚಾರಕ್ಕೆ ಯಡಿಯೂರಪ್ಪ ಅವರು ಈಶ್ವರಪ್ಪರಿಗೆ ಹಿನ್ನಡೆ ಉಂಟು ಮಾಡಲು ಪ್ರಯತ್ನಿಸಿದ್ದಾರೆ. ಈ ನಡುವೆಯೇ ಮತ್ತೊಂದು ಬೆಳವಣಿಗೆ ನಡೆದಿದ್ದು, ರಾಜ್ಯ ಬಿ.ಜೆ.ಪಿ.ಯ ಕೆಲವು ನಾಯಕರು, ಯಡಿಯೂರಪ್ಪನವರ ಕಾರ್ಯ ವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಅಶ್ವಥ್ ನಾರಾಯಣ್, ಮಲ್ಕಾಪುರೆ ಸೇರಿದಂತೆ 24 ಮಂದಿ ಮುಖಂಡರು ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ, ನಂದೀಶ್ ಅವರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು ಹಾಗೂ ಹೊನ್ನಾಳಿ ಮಂಡಲ ಅಧ್ಯಕ್ಷ ಹನುಮಂತಪ್ಪನವರ ಅಮಾನತು ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ತಾವು ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಪಕ್ಷ ಸಂಘಟನೆ, ಚುನಾವಣೆಗೆ ಸಿದ್ಧತೆ ಎಲ್ಲಾ ಕಾರ್ಯಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುತ್ತೀರಿ ಎಂದು ಭಾವಿಸಿದ್ದೆವು. ಆದರೆ, ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಪಕ್ಷದ ವಕ್ತಾರರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ.

ಪದಾಧಿಕಾರಿಗಳನ್ನು ನೇಮಕ ಮಾಡುವಾಗ, ಅನೇಕ ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ. ಇದರಿಂದಾಗಿ ಕೆಲವು ಜಿಲ್ಲಾ ಘಟಕಗಳಲ್ಲಿ 2 ಬಣಗಳು ಕಾಣಿಸಿಕೊಂಡಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಕುರಿತಾಗಿ ಹಿಂದೆಯೇ ಪತ್ರ ಬರೆದು ಚರ್ಚೆಗೆ ಸಮಯ ಕೇಳಿದ್ದರೂ, ಸ್ಪಂದಿಸದ ಕಾರಣ ಮತ್ತೆ ಪತ್ರ ಬರೆಯುತ್ತಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ.

ಅಲ್ಲದೇ, ತಮ್ಮೊಂದಿಗೆ ರಾಜ್ಯದಲ್ಲಿ ಪಕ್ಷ ಕಟ್ಟಲು ಶ್ರಮಿಸಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪನವರನ್ನು ಹೊರಗಿಟ್ಟು, ಬರ ಅಧ್ಯಯನ ತಂಡಗಳನ್ನು ರಚಿಸಿದ್ದು, ಸರಿಯಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಬೇರೆಯದೇ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷ ಸಂಘಟನೆ, ಪದಾಧಿಕಾರಿಗಳ ನೇಮಕ ಮೊದಲಾದ ವಿಚಾರಗಳ ಬಗ್ಗೆ ಚರ್ಚಿಸಲು ಸಮಯ ಕೇಳಿದ್ದರೂ ನೀವು ಸ್ಪಂದಿಸಿಲ್ಲ. ನಿಮ್ಮ ಏಕಪಕ್ಷೀಯ ತೀರ್ಮಾನದಿಂದ ನೇಮಕ ಮಾಡಿರುವ ಪದಾಧಿಕಾರಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಬೇಕೆಂದು ತಿಳಿಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪನವರ ಕಾರ್ಯ ವೈಖರಿ ಕುರಿತಾಗಿ ಪಕ್ಷದ ಶಾಸಕರು ಹಿರಿಯ ನಾಯಕರೇ ಪತ್ರ ಬರೆದಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಡಿಯೂರಪ್ಪ, ಈಶ್ವರಪ್ಪನವರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಸಂಚಲನ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...