alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ.ಯಿಂದ ದೂರವಾಗ್ತಾರಾ ಈಶ್ವರಪ್ಪ..?

kse-bsy

ಬೆಂಗಳೂರು: ರಾಜ್ಯ ಬಿ.ಜೆ.ಪಿ. ಹಿರಿಯ ನಾಯಕರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಈಶ್ವರಪ್ಪ ಬಿ.ಜೆ.ಪಿ.ಯಿಂದ ದೂರವಾಗ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ವಿಚಾರವಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಡುವೆ ಸಂಘರ್ಷ ಏರ್ಪಟ್ಟಿದೆ.

ಮೊದಲಿಗೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದಲೇ ಬ್ರಿಗೇಡ್ ಸ್ಥಾಪಿಸಲಾಗಿದೆ ಎಂದು ಈಶ್ವರಪ್ಪ ಹೇಳಿದ್ದರಾದರೂ ಬಳಿಕ, ಯಾರನ್ನೂ ಮುಖ್ಯಮಂತ್ರಿ ಮಾಡುವ ಯೋಚನೆ ಬ್ರಿಗೇಡ್ ಗೆ ಇಲ್ಲ. ಹಿಂದ ವರ್ಗದ ಸಂಘಟನೆ, ಅಭಿವೃದ್ಧಿ ಉದ್ದೇಶ ಹೊಂದಿದೆ. ರಾಜಕೀಯೇತರ ಸಂಘಟನೆಯಾಗಿ ಮುಂದುವರೆಯಲಿದೆ ಎಂದು ಹೇಳಿದ್ದರು.

ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ, ತಮ್ಮ ಬೆಂಬಲಿಗರನ್ನು ಪಕ್ಷದ ಪದಾಧಿಕಾರಿಗಳಾಗಿ ನೇಮಕ ಮಾಡಿದ್ದಾರೆ. ಬಹುದಿನಗಳಿಂದ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಮೊದಲಿಗೆ ಧ್ವನಿ ಎತ್ತಿದ್ದೇ ಈಶ್ವರಪ್ಪ. ಅವರು ದೆಹಲಿವರೆಗೂ ಹೋಗಿ ವರಿಷ್ಠರಿಗೆ ದೂರು ನೀಡಿದ್ದರು.

ಬಳಿಕ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಜಂಗೀ ಕುಸ್ತಿ ಜೋರಾಗತೊಡಗಿತು. ಯಡಿಯೂರಪ್ಪ ಯಾವುದೇ ಕಾರಣಕ್ಕೂ ಪ್ರತ್ಯೇಕ ಸಂಘಟನೆ ಬೇಡ, ಪಕ್ಷದ ವೇದಿಕೆಯಲ್ಲೇ ಎಲ್ಲಾ ವರ್ಗದ ಸಂಘಟನೆ ಮಾಡಬೇಕೆಂದು ತಾಕೀತು ಮಾಡಿದ್ದರು.

ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪಕ್ಷದ ಕೆಲವು ನಾಯಕರ ಮೂಲಕವೂ ಎಚ್ಚರಿಕೆ ನೀಡಿದ್ದರು. ಆದರೆ, ಇದನ್ನೆಲ್ಲಾ ನಿರ್ಲಕ್ಷಿಸಿದ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಇದು ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿದ್ದು, ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರಿಷ್ಠರಿಗೆ ಒತ್ತಡ ಹೇರಿದ್ದಾರೆ. ಬಿ.ಜೆ.ಪಿ.ಯಿಂದ ರಚಿಸಲಾಗಿದ್ದ ಬರ ಅಧ್ಯಯನ ಸಮಿತಿಯಿಂದ ಈಶ್ವರಪ್ಪನವರನ್ನು ಕೈಬಿಟ್ಟಿದ್ದಾರೆ.

ಈಶ್ವರಪ್ಪ ಕೂಡ ವರಿಷ್ಠರ ಬೆಂಬಲ ಪಡೆದೇ ಚಟುವಟಿಕೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಇದು ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿದೆ. ಮೊದಲ ಹಂತವಾಗಿ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಬಿ.ಎಂ.ಪಿ. ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಹೀಗಿದ್ದರೂ, ವೆಂಕಟೇಶ ಮೂರ್ತಿ ತಲೆಕೆಡಿಸಿಕೊಂಡಿಲ್ಲ. ಪಕ್ಷದಿಂದ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದಾರೆ. ಪದ್ಮನಾಭ ನಗರದಲ್ಲಿ ನಡೆದ ಬ್ರಿಗೇಡ್ ಪೂರ್ವಭಾವಿ ಸಭೆಗೆ ಪಕ್ಷದ ಕಾರ್ಯಕರ್ತರು ಹೋಗದಂತೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಸೂಚನೆ ನೀಡಿದ್ದರೆನ್ನಲಾಗಿದೆ.

ಹೀಗಿದ್ದರೂ, ಬ್ರಿಗೇಡ್ ಸಭೆ ನಡೆದಿದ್ದು, ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಅಮಾನತು ಮಾಡಿದರೆ ಹೆದರಿಕೊಳ್ಳಬೇಕಿಲ್ಲ. ಅಮಾನತು ಮಾಡಿದರೆ, ಸರ್ಟಿಫಿಕೇಟ್ ಸಿಕ್ಕಂತೆ ಎಂದು ಹೇಳಿದ್ದಾರೆ.

ಪಕ್ಷದಿಂದ ಅಮಾನತುಗೊಂಡಿರುವ ವೆಂಕಟೇಶ ಮೂರ್ತಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕೆ ಈಶ್ವರಪ್ಪನವರ ವಿರುದ್ಧವೂ ಶಿಸ್ತುಕ್ರಮ ಕೈಗೊಂಡು ಪಕ್ಷದಿಂದ ಕೈ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...