alex Certify
ಕನ್ನಡ ದುನಿಯಾ       Mobile App
       

Kannada Duniya

‘ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ’

ಶಿವಮೊಗ್ಗ : ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಒಟ್ಟಿಗೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ವಿಪಕ್ಷ ನಾಯಕ ಹಾಗೂ ಪಕ್ಷದ ಹಿರಿಯ ಮುಖಂಡರಾದ ಕೆ.ಎಸ್. ಈಶ್ವರಪ್ಪ ಬಗ್ಗೆ ಆಡಬಾರದ ಮಾತನ್ನು ಆಡಿರುವುದು ನೋವುಂಟಾಗಿದೆ ಎಂದು ಯಂಗ್ ಬ್ರಿಗೇಡ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಇದು ಸೂಕ್ತವಲ್ಲ. ಪ್ರತಿಭಟನೆ ನಡೆಸುವುದು ಬೇಡ ಎಂಬ ಮನವಿಯನ್ನು ಪುರಸ್ಕರಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ ಎಂದರು.

ಕೆ.ಎಸ್. ಈಶ್ವರಪ್ಪ ಕುರಿತು ಬಿಳಕಿ ಕೃಷ್ಣಮೂರ್ತಿ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಚುನಾವಣೆ ಹತ್ತಿರದಲ್ಲಿರುವಾಗ ಈ ರೀತಿ ಗೊಂದಲ ಸೃಷ್ಟಿಯಾಗಬಾರದು. ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂಬುದನ್ನು ವರಿಷ್ಟರು ತೀರ್ಮಾನಿಸುತ್ತಾರೆ. ಅಭ್ಯರ್ಥಿ ಯಾರೇ ಆಗಲೀ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಹೇಳಿದರು.

ಪಕ್ಷದಲ್ಲಿ ಸಣ್ಣ ಘಟನೆಯೊಂದು ನಡೆದುಹೋಗಿದೆ. ಇದನ್ನೇ ದೊಡ್ಡದಾಗಿ ಮಾಡುವುದು ಬೇಡ. ಪ್ರಧಾನಿ ಮೋದಿಯವರೇ ಈಶ್ವರಪ್ಪ ಕುರಿತು ತಮ್ಮ ಪುರಾನ ಮಿತ್ರ ಎಂದು ಗೌರವಿಸಿದ್ದಾರೆ. ಹೀಗಿರುವಾಗ ಸ್ಥಳೀಯ ಕಾರ್ಯಕರ್ತರೊಬ್ಬರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದರಲ್ಲಿ ಅರ್ಥವಿಲ್ಲ. ಆಕಸ್ಮಿಕವಾಗಿ ಬಂದ ಮಾತಿಗೆ ಹೆಚ್ಚು ಮಾನ್ಯತೆ ನೀಡುವುದು ಬೇಡ. ಇದರಿಂದ ಪಕ್ಷಕ್ಕೆ ಹಾಗೂ ಕೆ.ಎಸ್. ಈಶ್ವರಪ್ಪರಿಗೂ ಮುಜುಗರ ಉಂಟಾಗುತ್ತದೆ ಎಂದರು.

ಹೇಳಿಕೆಯಿಂದ ಈಶ್ವರಪ್ಪರ ಅಭಿಮಾನಿಗಳಿಗೆ ನೋವುಂಟಾಗಿದೆ. ಬಿಳಕಿ ಕೃಷ್ಣಮೂರ್ತಿ ಮಾತಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಶಾಸಕ ಬಿ.ವೈ. ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಎಸ್. ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ಅವರ ಕುರಿತಂತೆ ಅವಹೇಳನಕಾರಿ ಪದ ಬಳಕೆ ಮಾಡಬಾರದು ಎಂದು ತಿಳಿಸಿದ್ಧಾರೆ. ಈ ಘಟನೆಯನ್ನು ದೊಡ್ಡವಾಗಿ ಬಿಂಬಿಸುವುದು ಬೇಡ ಎಂದು ಹೇಳಿದರು.

ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ತಮ್ಮನ್ನು ಪಕ್ಷ ಘೋಷಿಸಿದೆ. ಅದರಿಂದ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಹೆಸರು ಮುಂಚೂಣಿಗೆ ತರುವ ಅವಶ್ಯಕತೆ ಇಲ್ಲ. ವ್ಯಕ್ತಿಗತವಾಗಿಯೂ ಈ ಬಾರಿ ಕಣಕ್ಕಿಳಿಯುವ ಅಪೇಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಚ್ಚರಿಪಡುವಂತಹ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂಬುದು ಊಹೆಯಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...