alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ವೃದ್ಧ ದಂಪತಿ ಹತ್ಯೆ ರಹಸ್ಯ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊಮ್ಮಗನೇ ಹತ್ಯೆಗೆ ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದ್ದು, ಪ್ರಕರಣ ಬೆಳಕಿಗೆ ಬಂದ 24 ಗಂಟೆಯೊಳಗೆ ಆರೋಪಿಗಳು ಅಂದರ್ ಆಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದಾನೆ.

ಮಾರತ್ ಹಳ್ಳಿ ಸೇತುವೆ ಬಳಿ ಅಶ್ವಥ್ ನಗರದಲ್ಲಿ ಬಿ.ಇ.ಎಲ್. ನಿವೃತ್ತ ಉದ್ಯೋಗಿ ಗೋವಿಂದನ್, ಅವರ ಪತ್ನಿ ಸರೋಜ ಅವರ ಕೈ ಕಾಲು ಕಟ್ಟಿ ಹಾಕಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ, ಮನೆಯಲ್ಲಿದ್ದ ನಗ, ನಗದು ದೋಚಲಾಗಿತ್ತು.

ಘಟನೆ ನಡೆದು 3 ದಿನಗಳ ಬಳಿಕ ದಂಪತಿ ಹತ್ಯೆಯಾದ ವಿಚಾರ ಬೆಳಕಿಗೆ ಬಂದಿದ್ದು, ದಂಪತಿಯ ಮೊಮ್ಮಗ ಆಸ್ತಿ, ಚಿನ್ನ ದೋಚುವ ಉದ್ದೇಶದಿಂದ ಕೊಲೆಗೆ ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಹಸನ್ ಪಾಶ ಹಾಗೂ ಮತ್ತೊಬ್ಬನೊಂದಿಗೆ ಸೇರಿ ಕೊಲೆಗೆ ಮೊಮ್ಮಗ ಸಂಚು ರೂಪಿಸಿದ್ದಾನೆ. 3 ದಿನಗಳ ಹಿಂದೆ ದಂಪತಿಯನ್ನು ಕೊಲೆ ಮಾಡಿ ನಗದು, ಚಿನ್ನಾಭರಣ ದೋಚಿದ್ದ ದುಷ್ಕರ್ಮಿಗಳು ಅವುಗಳನ್ನು ಹಂಚಿಕೊಂಡಿದ್ದಾರೆ.

2 ದಿನಗಳ ಬಳಿಕ ಮತ್ತೆ ಬಂದು ಸಿಲಿಂಡರ್ ಸ್ಪೋಟಿಸುವ ಪ್ರಯತ್ನ ನಡೆಸಿದ್ದಾರೆ. ಸಿಲಿಂಡರ್ ಸ್ಪೋಟದಿಂದ ದಂಪತಿ ಮೃತಪಟ್ಟಿದ್ದಾರೆ ಎಂದು ಬಿಂಬಿಸುವುದು ಅವರ ಪ್ಲಾನ್ ಆಗಿತ್ತು.

ಆದರೆ, ಸಿಲಿಂಡರ್ ಸ್ಪೋಟಗೊಂಡಿರಲಿಲ್ಲ. ಆರೋಪಿಗಳ ಜಾಡು ಹಿಡಿದ ಪೊಲೀಸರು, ಹಂತಕ ಹಸನ್ ಪಾಶನನ್ನು ಬಂಧಿಸಲು ತೆರಳಿದ್ದಾರೆ.

ಆದರೆ, ಹಸನ್ ಪಾಶ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದು, ಆತನ ಮೇಲೆ ಫೈರಿಂಗ್ ಮಾಡಲಾಗಿದೆ. ಗುಂಡೇಟು ತಗುಲಿ ಗಾಯಗೊಂಡಿರುವ ಪಾಶನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರ ವಿಚಾರಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...