
ಡಿಸೆಂಬರ್ 5ರಂದು ನಡೆಯಲಿರುವ ವಿಧಾನ ಸಭಾ ಉಪ ಚುನಾವಣೆ ಬಹಿರಂಗ ಪ್ರಚಾರ ಕಾರ್ಯಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ ಬೀಳಲಿದ್ದು, ಅಷ್ಟರೊಳಗಾಗಿ ಅಭ್ಯರ್ಥಿಯನ್ನು ಹೊರತುಪಡಿಸಿ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರ ತೆರವು ಮಾಡಬೇಕಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸೋಮವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಮತದಾನಕ್ಕೆ 48 ಗಂಟೆ ಮುಂಚಿನ ಅವಧಿಯನ್ನು ಸ್ತಬ್ಧ ಕಾಲ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಬಹಿರಂಗ ಪ್ರಚಾರ ನಡೆಸುವಂತಿಲ್ಲ ಎಂದು ಹೇಳಿದರು.
ಆದರೆ ಈ ಅವಧಿಯಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಬಹುದಾಗಿದೆ ಎಂದು ಹೇಳಿದ ಅವರು, ಬಹಿರಂಗ ಪ್ರಚಾರ ಕೊನೆಗೊಳ್ಳುವ ಮಂಗಳವಾರ ಸಂಜೆ 6 ಗಂಟೆಯ ಬಳಿಕ ವಿಧಾನಸಭಾ ಉಪ ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಹೋಟೆಲ್ ಮತ್ತು ಲಾಡ್ಜ್ ಗಳನ್ನು ಪರಿಶೀಲನೆ ನಡೆಸಿ ಅನ್ಯ ಕ್ಷೇತ್ರದಿಂದ ಬಂದ ರಾಜಕೀಯ ಮುಖಂಡರ ವಾಸ್ತವ್ಯವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.