alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರ ರಾಜಕಾರಣದಲ್ಲೂ ಮಿಂಚಿದ ರಾಜ್ಯ ನಾಯಕರು

ರಾಜ್ಯದ ರಾಜಕೀಯದಲ್ಲಿ ಗಮನ ಸೆಳೆದಿದ್ದ ಅನೇಕ ನಾಯಕರು ರಾಷ್ಟ್ರ ರಾಜಕಾರಣದಲ್ಲಿಯೂ ಮಿಂಚಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರ ರಾಜಕಾರಣದಲ್ಲಿಯೂ ಗಮನ ಸೆಳೆದ ಕೆಲವು ನಾಯಕರ ಕುರಿತಾದ ಮಾಹಿತಿ ಇಲ್ಲಿದೆ.

ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದ ಅನೇಕ ನಾಯಕರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ರಾಜ್ಯಪಾಲರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳ ಪಕ್ಷದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದರು. ಪ್ರಧಾನಿಯಾದ ಮೊದಲ ಕನ್ನಡಿಗ ದೇವೇಗೌಡರು ಪ್ರಸ್ತುತ ಲೋಕಸಭೆ ಸದಸ್ಯರಾಗಿದ್ದಾರೆ. ಇನ್ನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಡಿ. ಜತ್ತಿ ಉಪರಾಷ್ಟ್ರಪತಿಯಾಗಿದ್ದರು. ಅದಕ್ಕಿಂತ ಮೊದಲು ವಿವಿಧ ರಾಜ್ಯಗಳ ರಾಜ್ಯಪಾಲರಾಗಿದ್ದರು.

ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಎ.ಐ.ಸಿ.ಸಿ. ಅಧ್ಯಕ್ಷರಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿದ್ದರು. ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಕೇಂದ್ರ ಸಚಿವರಾಗಿದ್ದಾರೆ. ಅನಂತ್ ಕುಮಾರ್ ಸೇರಿದಂತೆ ಹಲವರು ಕೇಂದ್ರ ಸಂಪುಟದಲ್ಲಿದ್ದಾರೆ. ರಾಮಾಜೋಯ್ಸ್, ಮಾರ್ಗರೇಟ್ ಆಳ್ವ ಮೊದಲಾದವರು ವಿವಿಧ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ರಾಜಕೀಯವಾಗಿ ಮತ್ತೊಮ್ಮೆ ನೆಲೆ ಕಂಡುಕೊಳ್ಳಲು ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದ ವೇಳೆ ತಾವು ಪ್ರತಿನಿಧಿಸುತ್ತಿದ್ದ ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಡಿ.ಬಿ. ಚಂದ್ರೇಗೌಡ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

ರಾಜ್ಯದ ಕೆಲ ರಾಜಕಾರಣಿಗಳು ತಮ್ಮ ಪಕ್ಷದ ಕೇಂದ್ರ ನಾಯಕರಿಗೆ ಹಲವು ಸಂದರ್ಭಗಳಲ್ಲಿ ಸೆಡ್ಡು ಹೊಡೆದು ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿರುವ ಘಟನೆಗಳೂ ನಡೆದಿವೆ. ಈ ಪೈಕಿ ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ಯಡಿಯೂರಪ್ಪ ಪ್ರಮುಖರು. ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಸಿಡಿದೆದ್ದ ಎಸ್. ಬಂಗಾರಪ್ಪನವರು ಪಕ್ಷದಿಂದ ಹೊರ ಬಂದು ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದರು. ಬಂಗಾರಪ್ಪನವರ ಶಕ್ತಿಯನ್ನು ಅರಿತ ಕಾಂಗ್ರೆಸ್ ಪಕ್ಷ ಪುನಃ ಅವರನ್ನು ಪಕ್ಷಕ್ಕೆ ಕರೆದುಕೊಂಡಿತ್ತು.

ಅದೇ ರೀತಿ ಯಡಿಯೂರಪ್ಪನವರು ತಮಗೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಸ್ವಂತ ಪಕ್ಷ ಕಟ್ಟಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು. ಚುನಾವಣೆಯ ಸೋಲಿನಿಂದ ಪಾಠ ಕಲಿತ ಕೇಂದ್ರ ಬಿಜೆಪಿ ನಾಯಕರು, ಬಳಿಕ ಯಡಿಯೂರಪ್ಪರನ್ನು ಪಕ್ಷಕ್ಕೆ ಬರ ಮಾಡಿಕೊಂಡಿದ್ದಲ್ಲದೇ ಯಡಿಯೂರಪ್ಪರನ್ನು ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಹೀಗೆ ರಾಜ್ಯದ ಹಲವು ರಾಜಕೀಯ ನಾಯಕರು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪನ್ನು ಮೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...