alex Certify
ಕನ್ನಡ ದುನಿಯಾ       Mobile App
       

Kannada Duniya

ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ವಿಧಿವಶ

ವಸಾಹತು ಕಾಲಘಟ್ಟದ ನಂತರ ವಿಶ್ವದ ವಿವಿಧ ದೇಶಗಳಲ್ಲಾದ ಬದಲಾವಣೆಗಳನ್ನು ತಮ್ಮ ಕೃತಿಯಲ್ಲಿ ಹಿಡಿದಿಟ್ಟಿದ್ದ, ಬ್ರಿಟನ್ ಸಾಂಸ್ಕೃತಿಕ ಜಗತ್ತಿನ ಆಧಾರ ಸ್ತಂಭದಂತಿದ್ದ ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್(85) ಲಂಡನ್ ನಲ್ಲಿ ವಿಧಿವಶರಾಗಿದ್ದಾರೆ.

ನೈಪಾಲ್ ಅವರ ಮೊದಲ ಪತ್ನಿ ಪಾಟ್ರಿಸಿಯಾ ಹಾಲೆ 1996ರಲ್ಲಿ ನಿಧನರಾಗಿದ್ದು, ನಂತರ ನೈಪಾಲ್ ಅವರು ಪಾಕಿಸ್ತಾನದ ಪತ್ರಕರ್ತೆ ನಾದಿರಾ ಅವರನ್ನು ಮದುವೆಯಾದರು. ‘ತಮ್ಮನ್ನು ಪ್ರೀತಿಸುವವರು ಸುತ್ತುವರಿದಿದ್ದಾಗಲೇ ಅವರು ಕಣ್ಮುಚ್ಚಿದರು. ಇಷ್ಟಪಟ್ಟ ಕ್ಷೇತ್ರಗಳಲ್ಲಿ ದೈತ್ಯ ಸಾಧನೆ ಮಾಡಿದ ಅವರು ಸೃಜನಶೀಲತೆ ಮತ್ತು ಚಲನಶೀಲತೆ ಇದ್ದ ಸೊಗಸಾದ ಬದುಕನ್ನು ಸಾಗಿಸಿದ್ದರು’ ಎಂದು ಅವರ ಪತ್ನಿ ನಾದಿರಾ ನೈಪಾಲ್ ತಿಳಿಸಿದ್ದಾರೆ.

ಬ್ರಿಟಿಷ್ ಸಾಹಿತ್ಯ ಕೃಷಿಯಲ್ಲಿ ಅಪಾರ ಹೆಸರು ಮಾಡಿದ್ದ ವಿ.ಎಸ್. ನೈಪಾಲ್ ಅವರ ಪೂರ್ಣ ಹೆಸರು ವಿದ್ಯಾಧರ್ ಸೂರಜ್‌ಪ್ರಸಾದ್ ನೈಪಾಲ್. ಟ್ರಿನಿಡಾಡ್‌ನಲ್ಲಿ ಆಗಸ್ಟ್ 17, 1932 ರಲ್ಲಿ ಜನಿಸಿದರು. ಅವರ ತಂದೆ ಭಾರತ ಸರ್ಕಾರದ ಸೇವೆಯಲ್ಲಿದ್ದರು. ಆಕ್ಸ್‌ಫರ್ಡ್‌ ವಿವಿಯಲ್ಲಿ ವಿದ್ಯಾರ್ಥಿ ವೇತನ ಪಡೆದು ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡಿದರು. ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರೂ ಜೀವನದ ಬಹುಕಾಲವನ್ನು ಪ್ರವಾಸದಲ್ಲಿಯೇ ಕಳೆದರು.

ನೈಪಾಲ್ ಅವರ ಆರಂಭದ ಕೃತಿಗಳು ವೆಸ್ಟ್‌ ಇಂಡೀಸ್‌ ಬದುಕನ್ನು ಹೆಚ್ಚು ಕೇಂದ್ರೀಕರಿಸಿದ್ದವು. 2001 ರಲ್ಲಿ ಅವರಿಗೆ ಸಾಹಿತ್ಯದ ಸಾಧನೆಗಾಗಿ ನೊಬೆಲ್ ಪುರಸ್ಕಾರ ಸಂದಿತ್ತು. ‘ಜಗತ್ತು ಸುತ್ತುವ ಈ ಪಯಣಿಗ ಮನೆಯಲ್ಲಿರುವುದೇ ಅಪರೂಪ. ಸಾಹಿತ್ಯ ಕೃತಿಗಳಲ್ಲಿನ ಅವರ ದನಿ ಅನುಕರಣೀಯ’ ಎಂದು ನೊಬೆಲ್ ಪ್ರಶಸ್ತಿ ನೀಡುವ ಸ್ವೀಡಿಷ್ ಅಕಾಡೆಮಿ ಇವರನ್ನು ಬಣ್ಣಿಸಿತ್ತು. ಅಲ್ಲದೇ ಜಗತ್ತನ್ನು ಆಳಿದ ಚಕ್ರಾಧಿಪತ್ಯಗಳು ಸಾಮಾನ್ಯ ಜನರಿಗಾಗಿ ಏನು ಮಾಡಿದವು ಎಂಬುದನ್ನು ನೈತಿಕ ಪ್ರಜ್ಞೆಯಲ್ಲಿ ಹಿಡಿದಿಡುತ್ತಿದ್ದ ಅವರ ಬರವಣಿಗೆ ದೈನಂದಿನ ಬದುಕಿಗೆ ಕನ್ನಡಿ ಹಿಡಿಯುವಂತೆ ಇದೆ ಎಂದು ಹೇಳಿತ್ತು.

ಸಾಹಿತ್ಯ ಕೃತಿಗಳ ಜೊತೆಜೊತೆಗೆ ತಮ್ಮ ನೇರ ಮತ್ತು ನಿಷ್ಠುರ ಮಾತುಗಳಿಂದಲೂ ಅವರು ಸುದ್ದಿಯಾಗುತ್ತಿದ್ದರು. ಭಾರತದ ರಾಜಕಾರಣಿಗಳ ಭಷ್ಟಾಚಾರ, ಹಳೆಯ ವಸಾಹತುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪಶ್ಚಿಮ ದೇಶಗಳ ಮನಃಸ್ಥಿತಿ ಮತ್ತು ನಿರಂಕುಶ ಆಡಳಿತಗಾರರ ಪ್ರಶ್ನಾತೀತ ವ್ಯಕ್ತಿಪೂಜೆಯ ಬಗ್ಗೆ ಅವರಿಗೆ ಅಪಾರ ಸಿಟ್ಟಿತ್ತು. ಇಂಥ ಹಲವು ಸಂಗತಿಗಳನ್ನು ಅವರ ‘ದಿ ರಿಟರ್ನ್ ಆಫ್ ಇವಾ ಪೆರೊನ್’ ಕೃತಿ ಹಿಡಿದಿಟ್ಟಿದೆ. ‘ಬೇರಿಲ್ಲದ ಬದುಕು’ ಅವರ ಇಷ್ಟದ ಪರಿಕಲ್ಪನೆ.

ಇವರ ಮೊದಲ ಕೃತಿ ‘ದ ಮೈಸ್ಟಿಕ್ ಮೆಶರ್’ 1951ರಲ್ಲಿ ಪ್ರಕಟಗೊಂಡಿತ್ತು. 1961ರಲ್ಲಿ ಪ್ರಕಟವಾದ ‘ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್’ ನೈಪಾಲ್ ಅವರ ಬಹುಚರ್ಚಿತ ಕೃತಿ. ನೈಪಾಲ್ ಅವರು ಒಟ್ಟು 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಬ್ರಿಟನ್‌ನ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಬೂಕರ್ ಪ್ರಶಸ್ತಿಯನ್ನು ಪಡೆದ ಮೊದಲಿಗರಲ್ಲಿ ಅವರೂ ಒಬ್ಬರು. 1971ರಲ್ಲಿ ನೈಪಾಲ್ ಅವರ “ಇನ್‌ ಎ ಫ್ರೀ ಸ್ಟೇಟ್” ಕೃತಿಗೆ ಬೂಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...