
ಜೀವನ ಯಾವ ಕ್ಷಣದಲ್ಲಿ ಬೇಕಾದ್ರೂ ಬದಲಾಗಬಹುದು. ಕಷ್ಟ ಕಾಣದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಪಾತಳಕ್ಕೆ ಬೀಳಬಹುದು. ಬಾಂಗ್ಲಾದೇಶದ 12ರ ಬಾಲೆ ಕಥೆ ಕಣ್ಣಲ್ಲಿ ನೀರು ತರಿಸುತ್ತದೆ. ರೋಹಾನಾ ಅಖ್ತರ್ ವಿಧವೆ ತಾಯಿ ಭಾರ ಇಳಿಸಿ ಸಹೋದರನ ಶಿಕ್ಷಣ ಹಾಗೂ ಆತನಿಗೊಂದು ಸೈಕಲ್ ಕೊಡಿಸಲು ಕಲ್ಲಿನ ಕಾರ್ಖಾನೆಯಲ್ಲಿ ಬೆವರಿಳಿಸಿ ದುಡಿಯುತ್ತಿದ್ದಾಳೆ.
ರೋಹಾನಾ ಅಖ್ತರ್ ಕಥೆಯನ್ನು ಬಾಂಗ್ಲಾದೇಶದ ಪ್ರಸಿದ್ಧ ಛಾಯಾಗ್ರಾಹಕ ಜಿಎಂಬಿ ಅಶೋಕ್ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ರೋಹಾನಾ ಅಖ್ತರ್ 6 ವರ್ಷದವಳಿದ್ದಾಗ ಆಕೆ ತಂದೆ ಸಾವನ್ನಪ್ಪಿದ್ದರಂತೆ. ಅಲ್ಲಿಂದ ಅಕ್ಷರಶಃ ಬೀದಿಗೆ ಬಿದ್ದ ರೋಹಾನಾ ಅಖ್ತರ್ ಕುಟುಂಬ ಕೆಲ ದಿನ ಅನ್ನ-ನೀರಿಲ್ಲದೆ ಪರದಾಡಿದ್ರಂತೆ. ತಾಯಿ ಕಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಲು ಹೋಗ್ತಿದ್ದಳಂತೆ. ಸದಾ ಪತಿ ಸಾವಿನ ನೋವಿನಲ್ಲಿದ್ದ ತಾಯಿಗೆ ಕೆಲಸದ ಮೇಲೆ ಗಮನವಿರಲಿಲ್ಲವಂತೆ. ತಾಯಿ ನೋವನ್ನು ಅರಿತ 6 ವರ್ಷದ ರೋಹಾನಾ ಅಖ್ತರ್ ತಾನೂ ಕಾರ್ಖಾನೆಗೆ ಹೋಗಲು ಶುರುಮಾಡಿದ್ಲಂತೆ. ಮೊದಲ ದಿನ ಮಗಳು ಕೆಲಸ ಮಾಡುವುದನ್ನು ನೋಡಿ ಕಣ್ಣೀರಿಟ್ಟಿದ್ದಳಂತೆ ತಾಯಿ.
ಆರಂಭದಲ್ಲಿ 30 ಇಟ್ಟಿಗೆ ಒಡೆಯುತ್ತಿದ್ದ ರೋಹಾನಾ ಅಖ್ತರ್ ಈಗ 120ಕ್ಕೂ ಹೆಚ್ಚು ಇಟ್ಟಿಗೆಯನ್ನು ಒಡೆಯುತ್ತಾಳಂತೆ. ತಮ್ಮನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುತ್ತಿರುವ ರೋಹಾನಾ ಅಖ್ತರ್ ಹೆಚ್ಚು ಸಮಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾಳಂತೆ. ತಮ್ಮ ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದು ಆತ ಟ್ಯೂಷನ್ ಗೆ ಹೋಗಿ ಬರಲು ಸಹಾಯವಾಗಲಿ ಎಂದು ಸೈಕಲ್ ಕೊಡಿಸುವ ಕನಸು ಕಾಣ್ತಿದ್ದಾಳೆ ರೋಹಾನಾ ಅಖ್ತರ್.