alex Certify
ಕನ್ನಡ ದುನಿಯಾ       Mobile App
       

Kannada Duniya

ಆಪರೇಶನ್ ನಡೆಯುತ್ತಿರುವಾಗ ರೋಗಿ ಮಾಡಿದ್ದೇನು..?

ರೋಗಿಯೊಬ್ಬ ಅಪರೇಷನ್ ಥಿಯೇಟರ್ ನಲ್ಲಿ ಸ್ಯಾಕ್ಸೋಫೋನ್‌ ನುಡಿಸುತ್ತಲೇ ಬ್ರೇನ್‌ ಟ್ಯೂಮರ್‌ ಆಪರೇಶನ್‌ ಮಾಡಿಸಿಕೊಂಡಿದ್ದಾನೆ..! ಆಶ್ಚರ್ಯವಾಯ್ತಾ..? ಹೌದು. ಆತನ ಹೆಸರು ಡ್ಯಾನ್‌ ಫಾಬಿಯೋ. ಅಮೆರಿಕದಲ್ಲಿರುವ ಈತ ಓರ್ವ ಸಂಗೀತ ಶಿಕ್ಷಕ. ಶಬ್ದಗಳಲ್ಲಿ ಉಲ್ಲೇಖಿಸಲಾಗದಷ್ಟರ ಮಟ್ಟಿಗೆ ಸಂಗೀತವನ್ನ ಪ್ರೀತಿಸುವ ವ್ಯಕ್ತಿತ್ವ ಆತನದು. ಹೀಗಿರುವಾಗ, ಆತನ ಜೀವನದಲ್ಲಿ ವಿಧಿ ಆಟವಾಡಿಬಿಟ್ಟಿತ್ತು.

ಆತನ ಮೆದುಳಿನೊಳಗೆ ಗಡ್ಡೆಯಾಗಿದೆ ಎಂಬ ವಿಷಯವನ್ನ ವೈದ್ಯರು ದೃಢೀಕರಿಸಿದ್ದರು. ದುರಾದೃಷ್ಟವಶಾತ್‌ ಮೆದುಳಿನ ಯಾವ ಭಾಗ ಸಂಗೀತಕ್ಕೆ ಸ್ಪಂದಿಸುತ್ತದೆಯೋ ಆ ಭಾಗಕ್ಕೆ ಅತೀ ಹತ್ತಿರದಲ್ಲಿಯೇ ಗಡ್ಡೆಯಾಗಿತ್ತು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಡ್ಯಾನ್‌ ತಾನು ತನ್ನ ಸಂಗೀತ ಕಲೆಯನ್ನ ಕಳೆದುಕೊಳ್ಳುತ್ತೇನೆ ಎಂಬ ವಿಷಯವನ್ನ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ.

ಹೀಗಾಗಿ ನುರಿತ ನರರೋಗ ತಜ್ಞರೂ ಕೂಡ ಈ ಆಪರೇಶನ್‌ನಲ್ಲಿ ಪಾಲ್ಗೊಂಡಿದ್ದೂ ಅಲ್ಲದೆ, ಡ್ಯಾನ್‌ ನ ಸಂಗೀತದ ಕಲೆಯನ್ನ ಉಳಿಸುವ ಸಲುವಾಗಿ, ಆಪರೇಶನ್‌ ಮಾಡುವಾಗ ಸಂಗೀತವನ್ನ ಜಾಗೃತಗೊಳಿಸಬೇಕು ಎಂದು ನಿರ್ಧರಿಸಿ, ಡ್ಯಾನ್‌ಗೆ ಅಪರೇಶನ್‌ ಮುಗಿಯುವ ತನಕವೂ ಸ್ಯಾಕ್ಸೋಫೋನ್‌ ನುಡಿಸುತ್ತಿರುವಂತೆ ಸೂಚಿಸಲಾಯಿತು.  ವೈದ್ಯರ ಸಲಹೆಯಂತೆ ಡ್ಯಾನ್‌, ಸ್ವತಃ ತನಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸಮಯದಲ್ಲಿ ಸ್ಯಾಕ್ಸೋಫೋನ್‌ ನುಡಿಸಿದ.   ಲಯಬದ್ಧವಾಗಿ ಡ್ಯಾನ್‌ ಸ್ಯಾಕ್ಸೋಫೋನ್‌ ನುಡಿಸುತ್ತಿರುವುದನ್ನ ಗಮನಿಸಿದ ವೈದ್ಯರಿಗೆ ಆಗಲೇ ತಿಳಿದಿತ್ತು ಆಪರೇಶನ್‌ ಸಕ್ಸಸ್‌ ಅಂತ..!

ಈ ಘಟನೆ ನಡೆದಿದ್ದು 2015ರಲ್ಲಿ. ಸಂಗೀತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಡ್ಯಾನ್‌ಗೆ ಇದ್ದಕ್ಕಿದ್ದಂತೆ ವಿಚಿತ್ರ ಭ್ರಮೆಗಳು ಕಾಡಲು ಶುರುವಾಗಿದ್ದವು ಮತ್ತು ತಲೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿತ್ತು. ಪರೀಕ್ಷೆ ನಡೆಸಿದಾಗ ತಿಳಿದಿದ್ದೇ ಬ್ರೇನ್‌ ಟ್ಯೂಮರ್‌ನ ವಿಷಯ. ಡ್ಯಾನ್‌ ಫಾಬಿಯೋ ಮೆದುಳಿನಲ್ಲಿ ಗಡ್ಡೆಯಿದೆ ಎಂದು ತಿಳಿದಾಗ ಆತನ ವಯಸ್ಸು ಕೇವಲ 25 ವರ್ಷ ಮಾತ್ರ.

ಡ್ಯಾನ್‌ ಸಮಸ್ಯೆಯನ್ನ ಸವಾಲಾಗಿ ಸ್ವೀಕರಿಸಿದ ಅಮೆರಿಕದ ನ್ಯೂಯಾರ್ಕ್‌‌ನಲ್ಲಿರುವ ರೋಚೆಸ್ಟರ್ ವಿಶ್ವವಿದ್ಯಾಲಯದ ವೈದ್ಯರು, ಆತನಿಗೆ ಚಿಕಿತ್ಸೆ ನೀಡಿ, ಅವನಲ್ಲಿರುವ ಸಂಗೀತ ಕಲೆಯನ್ನೂ ಉಳಿಸಿಕೊಡುವ ಸಾಹಸಕ್ಕೆ ಕೈ ಹಾಕಿದರು. ಶಸ್ತ್ರ ಚಿಕಿತ್ಸೆ ಮಾಡಿರುವ ಡಾ. ವೆಬ್ಸ್‌ಸ್ಟರ್‌ ಪಿಲ್ಚರ್ ಪ್ರಕಾರ, ಇದೇ ಮೊದಲ ಬಾರಿಗೆ ಮೆದುಳಿನ ಗಡ್ಡೆಯ ಶಸ್ತ್ರಚಿಕಿತ್ಸೆಯಲ್ಲಿ ಇಂಥ ಕ್ರಮವನ್ನ ಕೈಗೊಳ್ಳಲಾಗಿದೆಯಂತೆ. ಈಗ ಶಸ್ತ್ರಚಿಕಿತ್ಸೆ ಪಡೆದ ಡ್ಯಾನ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮೊದಲಿನಂತೆಯೇ ಸಂಗೀತ ಶಿಕ್ಷಕರಾಗಿಯೇ ಕೆಲಸ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...