alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ಕುಟುಂಬದ ಕಣ್ಣೀರಿನ ಕಥೆ…!

ಜಲಂಧರ್ ಮೂಲದ ಆ ದಂಪತಿ ತಮ್ಮ ಏಕೈಕ ಪುತ್ರನ ಭವಿಷ್ಯದ ಕುರಿತು ಆಪಾರ ಕನಸು ಕಟ್ಟಿದ್ದರು. ದಂಪತಿಗಳ ಕನಸನ್ನು ನನಸು ಮಾಡುವತ್ತ ಅವರ ಪುತ್ರನೂ ಹೆಜ್ಜೆಯಿಟ್ಟಿದ್ದು, ಆದರೆ ಬುಧವಾರ ಬೆಳಿಗ್ಗೆ ಬಂದ ಸುದ್ದಿ ದಂಪತಿ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಏಕೈಕ ಪುತ್ರನನ್ನು ಕಳೆದುಕೊಂಡ ಕುಟುಂಬ ಶೋಕದ ಮಡುವಿನಲ್ಲಿ ಮುಳುಗಿದೆ.

ಜಲಂಧರ್ ನ ಗ್ರೀನ್ ಮಾಡೆಲ್ ಟೌನ್ ನಿವಾಸಿ ಇಂದ್ರಜಿತ್ ಜುನೇಜಾ ದಂಪತಿಗಳಿಗೆ ಸಹಜ್ ಜುನೇಜಾ ಏಕಮಾತ್ರ ಪುತ್ರ. ಜಲಂಧರ್ ನ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ 12 ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ 19 ವರ್ಷದ ಸಹಜ್ ಜುನೇಜಾ, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂಬ ಬಯಕೆ ಹೊಂದಿದ್ದ.

ಮಗನ ಕನಸಿಗೆ ಪೋಷಕರೂ ಸಾಥ್ ನೀಡಿದ್ದು, ಹಣಕಾಸು ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರದಿದ್ದರೂ ಇದ್ದೊಬ್ಬ ಮಗನ ಹಂಬಲ ಈಡೇರಿಸಲು ಸ್ನೇಹಿತರು, ಸಂಬಂಧಿಕರಿಂದ 12 ಲಕ್ಷ ರೂ. ಸಾಲ ಮಾಡಿ ಮಗನನ್ನು ಉನ್ನತ ವ್ಯಾಸಂಗಕ್ಕೆ ಒಂಟಾರಿಯೋದ ಲ್ಯಾಂಬ್ಟನ್ ಕಾಲೇಜಿಗೆ ಸೇರಿಸಿದ್ದಾರೆ. ಸೋಮವಾರದಂದು ಒಂಟಾರಿಯೋ ತಲುಪಿದ ಸಹಜ್ ಜುನೇಜಾ, ಅಲ್ಲಿ ಜೀವಂತವಾಗಿ ಇದ್ದದ್ದು ಒಂದೇ ದಿನ. ಮಂಗಳವಾರ ರಾತ್ರಿ ತಾನು ತಂಗಿದ್ದ ಕೊಠಡಿಯಲ್ಲಿ ಮಲಗಿದವನು ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದಿರುವುದನ್ನು ಕಂಡ ಸ್ನೇಹಿತರು ಹೋಗಿ ನೋಡಿದಾಗ ಮಲಗಿದಲ್ಲೇ ಸಾವಿಗೀಡಾಗಿರುವುದು ಕಂಡು ಬಂದಿದೆ.

ಭಾನುವಾರ ಭಾರತದಿಂದ ವಿದೇಶಕ್ಕೆ ತೆರಳಿದ ಮಗ ಬುಧವಾರದ ವೇಳೆಗೆ ಇನ್ನಿಲ್ಲವೆಂಬ ಸುದ್ದಿ ಕೇಳಿ ಕುಟುಂಬ ತತ್ತರಿಸಿ ಹೋಗಿದೆ. ಆತನ ಶವವನ್ನು ವಾಪಾಸ್ ತರಲೂ ಅವರ ಬಳಿ ಹಣವಿಲ್ಲವಾಗಿದ್ದು, ತಮ್ಮ ಪರಿಸ್ಥಿತಿಯನ್ನು ವಿವರಿಸಿ ಮಗನ ಶವವನ್ನು ತರಲು ನೆರವಾಗುವಂತೆ ಕೋರಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆಯಲಾಗಿದೆ. ಅವರ ನೆರವಿನ ನಿರೀಕ್ಷೆಯಲ್ಲಿ ಕುಟುಂಬಸ್ಥರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...