alex Certify
ಕನ್ನಡ ದುನಿಯಾ       Mobile App
       

Kannada Duniya

ಅಜಾತ ಶತ್ರು ವಾಜಪೇಯಿಯವರ ವ್ಯಕ್ತಿ ಚಿತ್ರಣ

ಭಾರತ ರತ್ನ, ಅಜಾತ ಶತ್ರು, ಸುಮಾರು 50 ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ. ಮಾನವತಾವಾದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಹು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಸಂಜೆ ವಿಧಿವಶರಾಗಿದ್ದಾರೆ. ವಾಜಪೇಯಿಯವರ ವ್ಯಕ್ತಿ ಚಿತ್ರ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

ಡಿಸೆಂಬರ್ 25, 1924 ರಲ್ಲಿ ಅಟಲ್ ಅವರು ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ‘ಶಿಂದೆ ಕಿ ಚವ್ವಾಣಿ’ಎನ್ನುವ ಗ್ರಾಮದಲ್ಲಿ ಜನಿಸಿದರು.

ತಂದೆ ಒಬ್ಬ ಕವಿ ಮತ್ತು ಶಾಲಾ ಉಪಾಧ್ಯಾಯರು. ಅಟಲ್ ಅವರ ‘ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ’ ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು. ಅಟಲ್ ಅವರ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ.ಎ.ವಿ. ಕಾಲೇಜಿನಿಂದ ಪಡೆದರು.

ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಅಟಲ್ 1942 ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ವನ್ನು ಸೇರಿದರು. ‘ವೀರ ಅರ್ಜುನ’ ಹಾಗೂ ‘ಪಾಂಚಜನ್ಯ’ ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು.

ರಾಜಕೀಯ:
ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1968 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು. ವಾಜಪೇಯಿಯವರು ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು. 1977ರಲ್ಲಿ ಜನತಾ ಪಕ್ಷ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು.

ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979 ರವರೆಗೆ ವಿದೇಶಾಂಗ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ನಿರ್ಣಯ ಆರ್‌.ಎಸ್‌.ಎಸ್‌ ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ.

ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು 1980 ರಿಂದ 1984 ರವರೆಗೆ ಹಾಗೂ 1986 ರಿಂದ 1993 ಮತ್ತು 1996ರಲ್ಲಿ ಕಾರ್ಯ ನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ವ್ಯಾಪಕವಾಗಿ ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ.

ಮಹಾನ್ ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ ಹಾಗೂ ನುಡಿದಂತೆ ನಡೆಯುವ ಮಾನವತಾವಾದಿಯಾಗಿ ಭಾರತ, ಹಾಗೂ ವಿಶ್ವದಲ್ಲಿ ಹೆಸರುವಾಸಿಯಾಗಿದ್ದಾರೆ.

1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿಜೆಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿಜೆಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿಜೆಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು.

ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಜೆಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು.

ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ H.D. ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.

ಎರಡನೇ ಭಾರಿ ಪ್ರಧಾನಿ:
1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿಜೆಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು. ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು.

ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎಐಎಡಿಎಂಕೆ 1999 ರಲ್ಲಿ ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು.  ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು.

ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು.

ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು. ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.

1999 ರಲ್ಲಿ ವಾಜಪೇಯಿ ಪ್ರಧಾನಿಯಾದ ಕೇವಲ ಎರಡೇ ತಿಂಗಳಲ್ಲಿ ರಾಜಸ್ತಾನದ ಫೋಖ್ರಾನ್ ಎಂಬಲ್ಲಿ ಸುಧಾರಿತ ಅಣ್ವಸ್ತ್ರಗಳನ್ನು ಪರೀಕ್ಷಿಸಲು ಉತ್ಸುಕರಾಗಿದ್ದ ವಿಜ್ಞಾನಿಗಳಿಗೆ ವಾಜಪೇಯಿಯವರಿಂದ ಹಸಿರು ನಿಶಾನೆ ದೊರೆಯಿತು.

ಪ್ರಧಾನಿಯಾಗಿ ಮೂರನೇ ಕಾರ್ಯಾವಧಿ:
ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆ ಬಿಜೆಪಿ ಪಕ್ಷ ಮುನ್ನಡೆ ಸಾಧಿಸಿತು. ಕಾಂಗ್ರೆಸ್ 156 ಸೀಟುಗಳಿಗೆ ತೃಪ್ತಿಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು. ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ 1999 ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು. ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು.

ರಾಜಕೀಯ ನಿವೃತ್ತಿ:
ಡಿಸೆಂಬರ್ 2005 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ಮುಂದಿನ ಯಾವ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು. ಬಿಜೆಪಿ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ “ನನ್ನ ನಂತರ ಲಾಲ್‍ಕೃಷ್ಣ ಅಡ್ವಾಣಿ ಹಾಗೂ ಪ್ರಮೋದ್ ಮಹಾಜನ್ ಬಿ.ಜೆ.ಪಿ ಗೆ ರಾಮ ಲಕ್ಷ್ಮಣರಂತೆ ಇರಲಿದ್ದಾರೆ” ಎಂದು ಹೇಳುವ ಮೂಲಕ ತಮ್ಮ ನಂತರ ಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಸೂಚಿಸಿದ್ದರು. ಮುಂದೆ ಆರೋಗ್ಯ ಸಮಸ್ಯೆಯಿಂದ 2009 ರ ಲೋಕಸಭಾ ಚುನಾವಣೆಯ ಯಾವ ಪ್ರಚಾರ ಕಾರ್ಯಗಳಲ್ಲಿಯೂ ಭಾಗಿಯಾಗಲಿಲ್ಲ.

ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು. ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲನ Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ.

ಪ್ರಶಸ್ತಿಗಳು:
1992 ರಲ್ಲಿ, ಪದ್ಮ ವಿಭೂಷಣ.
1994 ರಲ್ಲಿ, ಲೋಕಮಾನ್ಯ ತಿಲಕ್ ಪ್ರಶಸ್ತಿ.
1994 ರಲ್ಲಿ, ಉತ್ತಮ ರಾಜಕೀಯ ಪಟು ಗೌರವ.
1994 ರಲ್ಲಿ, ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿ.
2015 ರಲ್ಲಿ ಭಾರತ ರತ್ನ ಪ್ರಶಸ್ತಿ.
2015 ರಲ್ಲಿ, ಬಾಂಗ್ಲಾ ವಿಮೋಚನಾ ಯುದ್ಧ ಪ್ರಶಸ್ತಿ

ವಾಜಪೇಯಿ ನಡೆದು ಬಂದ ದಾರಿ:

1951 – ಭಾರತೀಯ ಜನ ಸಂಘ ಪಕ್ಷದ ಸಂಸ್ಥಾಪನೆ
1957 – ಎರಡನೇ ಲೋಕಸಭೆಗೆ ಚುನಾಯಿತರಾಗಿದ್ದು
1957-77 – ಸಂಸತ್ ನಲ್ಲಿ ಭಾರತೀಯ ಜನಸಂಘ ಪಕ್ಷದ ನಾಯಕನಾಗಿದ್ದು
1962 – ರಾಜ್ಯ ಸಭೆಯ ಸದಸ್ಯರಾಗಿದ್ದು
1966 – 67 – ಸರ್ಕಾರಿ ಖಾತ್ರಿ ಸಮಿತಿಯ ಛೇರ್ಮನ್
1967 – ನಾಲ್ಕನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1967-70 – ಸಾರ್ವಜನಿಕ ಖಾತೆ ಸಮಿತಿಗೆ ಛೇರ್ಮನ್
1968-73 – ಭಾರತೀಯ ಜನಸಂಘ ಪಕ್ಷದ ಅಧ್ಯಕ್ಷರಾಗಿದ್ದು
1971 – ಐದನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
1977 – ಆರನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1977 – 79 – ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿದ್ದು
1977 – 80 – ಜನತಾ ಪಕ್ಷದ ಸಂಸ್ಥಾಪಕ ಸದಸ್ಯರಾಗಿದ್ದು
1980 – ಏಳನೇ ಲೋಕಸಭೆಗೆ ಮರುಚುನಾಯಿತರಾಗಿದ್ದು
1980-86 – ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿದ್ದು
1980-84, 1986 ಹಾಗು 1993 – 96 – ಸಂಸತ್ ನಲ್ಲಿ ಬಿಜೆಪಿ ನಾಯಕರಾಗಿ
1986 – ರಾಜ್ಯಸಭಾ ಸದಸ್ಯರಾಗಿ
1988 – 90 – ಗೃಹ ಸಮಿತಿ ಸದಸ್ಯರಾಗಿ ಹಾಗು ವ್ಯಾಪಾರ ವ್ಯವಹಾರ ಸಲಹಾ ಸಮಿತಿಯ ಸದಸ್ಯರಾಗಿ
1991 – ಹತ್ತನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
1991-93 – ಸಾರ್ವಜನಿಕ ಖಾತೆ ಸಮಿತಿಯ ಛೇರ್ಮನ್
1993-96 – ವಿದೇಶಾಂಗ ವ್ಯವಹಾರಗಳ ಸಮಿತಿ ಛೇರ್ಮನ್ ಹಾಗು ಲೋಕಸಭಾ ವಿಋಒಶ ಪಕ್ಷದ ನಾಯಕ
1996- ಹನ್ನೊಂದನೇ ಲೋಕಸಭೆಗೆ ಮರುಚುನಾಯಿತ
16 ಮೇ 1996 – 31 ಮೇ 1996 – ಭಾರತದ ಪ್ರಧಾನ ಮಂತ್ರಿಯಾಗಿ
1996-97 – ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ
1997-98 – ವಿದೇಶಾಂಗ ವ್ಯವಹಾರಗಳ ಸಮಿತಿ ಛೇರ್ಮನ್
1998 – ಹನ್ನೆರಡನೆ ಲೋಕಸಭೆಗೆ ಮರುಚುನಾಯಿತರಾಗಿದ್ದು
1998-99 – ಭಾರತದ ಪ್ರಧಾನ ಮಂತ್ರಿಗಳು, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಹಾಗು ಹಂಚಿಕೆಯಾಗದೆ ಉಳಿಕೆಯಾದ ಖಾತೆಗಳ ಸಚಿವರು
1999 – ಹದಿಮೂರನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
13 ಅಕ್ಟೋಬರ್ 1999 ರಿಂದ 13 ಮೇ 2004 ರವರೆಗೆ – ಭಾರತದ ಪ್ರಧಾನ ಮಂತ್ರಿಗಳಾಗಿ
2004 – ಹದಿನಾಲ್ಕನೇ ಲೋಕಸಭೆಗೆ ಮರು ಚುನಾಯಿತರಾಗಿದ್ದು
2005 – ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...