alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ ಅತಂತ್ರ ಸ್ಥಿತಿಯಲ್ಲಿದ್ದಾರೆ ಸಾವಿರಾರು ಜನ

ತಿರುವನಂತಪುರಂ: ಕೇರಳದಲ್ಲಿ ಕಾಣಿಸಿಕೊಂಡಿರುವ ಜಲಪ್ರಳಯದಲ್ಲಿ ಇನ್ನೂ ಕೂಡ ಸಾವಿರಾರು ಜನ ಅತಂತ್ರ ಸ್ಥಿತಿಯಲ್ಲೇ ಸಿಲುಕಿಕೊಂಡಿದ್ದಾರೆ. ಎಲ್ಲೆಲ್ಲೂ ನೀರು ಆವರಿಸಿರುವುದರಿಂದ ಜನ ಮೇಲ್ಛಾವಣೆಯಲ್ಲಿ ನಿಂತು ರಕ್ಷಣೆಗಾಗಿ ಕಾದು ಕುಳಿತಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಳೆ ಇನ್ನೂ ಮುಂದುವರೆದಿರುವುದು ಹಾಗೂ ಭೂ ಕುಸಿತಗಳು ಉಂಟಾಗುತ್ತಿರುವ ಕಾರಣ ರಕ್ಷಣಾ ಕಾರ್ಯಕ್ಕೂ ಹಿನ್ನೆಡೆ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗಸ್ಟ್ 8ರಿಂದ ಈವರೆಗೆ 194 ಮಂದಿ ಮೃತಪಟ್ಟಿರಬಹುದೆಂಬ ಲೆಕ್ಕ ಸಿಕ್ಕಿದ್ದು, ನಾಪತ್ತೆಯಾದವರು ಎಷ್ಟೆಂದು ಸ್ಪಷ್ಟವಾಗುತ್ತಿಲ್ಲ.

ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇನಾ ದೋಣಿಗಳು, ಬೋಟ್ ಮೂಲಕ ರಕ್ಷಿಸಿ ಅಪಾಯವಿಲ್ಲದ ಸ್ಥಳದಲ್ಲಿ ಆಶ್ರಯ ನೀಡಲಾಗಿದೆ.

ಪಥನಂತಿಟ್ಟ ಮತ್ತು ಚೆಂಗನ್ನೂರ್ ಮುಂತಾದ ಕಡೆ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಇನ್ನೂ ನೂರಾರು ಜನ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಅನೇಕ ಸ್ಥಳಗಳಲ್ಲಿ, ಸ್ಥಳೀಯ ಜನರು ರಕ್ಷಣಾ ಪಡೆ ಮತ್ತು ಎನ್ ಡಿ ಆರ್ ಎಫ್ ತಂಡದ ಜತೆಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಂಟಿ ಮನೆಗಳ ಬಗ್ಗೆ ಮಾಹಿತಿ ಕೊರತೆ ಉಂಟಾಗಿದ್ದು, ಅಲ್ಲಿ ಜನ ಇದ್ದಾರೋ ಇಲ್ಲವೋ ತಿಳಿಯುತ್ತಿಲ್ಲ. ಅಲ್ಲಿ ಜನ ಸಿಕ್ಕಿರಬಹುದು ಎಂಬ ಶಂಕೆ ಇದೆ. ಇಂತಹ ಮನೆಗಳ ಸಂಖ್ಯೆ ಸಾಕಷ್ಟಿವೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಈವರೆಗೆ ಎರ್ನಾಕುಲಂ ಜಿಲ್ಲೆಯಲ್ಲಿ ಮುಖ್ಯವಾಗಿ ಪರಾವೂರ್ ಮತ್ತು ಅಲುವಾ ತಾಲೂಕುಗಳಲ್ಲಿ ಸುಮಾರು 54,000 ಜನರನ್ನು ರಕ್ಷಿಸಲಾಗಿದೆ. ಕಾಲಟಿಯಲ್ಲಿ ಕಟ್ಟಡವೊಂದರಲ್ಲಿ 600 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಅವರನ್ನು ಶನಿವಾರ ರಕ್ಷಿಸಲಾಗಿದೆ. ಕೇರಳಾದ್ಯಂತ 3.53 ಲಕ್ಷ ಜನರು 3026 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

40,000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ನಾಶವಾಗಿದೆ, 1,000 ಕ್ಕಿಂತ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಮತ್ತು 26,000 ಭಾಗಶಃ ಹಾನಿಯಾಗಿದೆ. 134 ಸೇತುವೆಗಳು, ಅಪಾರ ಪ್ರಮಾಣದಲ್ಲಿ ರಸ್ತೆಗಳು ಹಾನಿಯಾಗಿವೆ.‌ ಒಟ್ಟಾರೆ 21 ಸಾವಿರ ಕೋಟಿ ನಷ್ಟವಾಗಿರಬಹುದೆಂಬುದು ಅಧಿಕಾರಿಗಳ ಲೆಕ್ಕಾಚಾರ. ಈ ನಡುವೆ ಆಗಸ್ಟ್ 20 ರವರೆಗೆ ಕೇರಳದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...