alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಚಿತ್ರಣ ಬದಲಿಸಲಿದೆ ದಿನಕರನ್ ಗೆಲುವು

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಚೆನ್ನೈನ ಆರ್.ಕೆ. ನಗರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಟಿ.ಟಿ.ವಿ. ದಿನಕರನ್ ನಿರೀಕ್ಷೆಗೂ ಮೀರಿ ಭಾರೀ ಅಂತರದೊಂದಿಗೆ ಜಯಗಳಿಸಿದ್ದಾರೆ.

ಜಯಲಲಿತಾ ನಿಧನದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಆಡಳಿತಾರೂಢ ಎ.ಐ.ಎ.ಡಿ.ಎಂ.ಕೆ. ಪಕ್ಷದ ನಾಯಕತ್ವಕ್ಕಾಗಿ ಪೈಪೋಟಿ ನಡೆದು, 2 ಬಣಗಳು ಸೃಷ್ಠಿಯಾಗಿವೆ. ಶಶಿಕಲಾ ಬಣ ಮೇಲುಗೈ ಸಾಧಿಸಿ ಎಡಪ್ಪಾಡಿ ಪಳನಿಸ್ವಾಮಿ ಮುಖ್ಯಮಂತ್ರಿಯಾದರೆ, ಮುಖ್ಯಮಂತ್ರಿಯಾಗಿದ್ದ ಒ. ಪನ್ನೀರ್ ಸೆಲ್ವಂ ತಮ್ಮ ಸ್ಥಾನವನ್ನು ಕಳೆದುಕೊಂಡು, ಮತ್ತೆ ಎಡಪ್ಪಾಡಿ ಪಳನಿಸ್ವಾಮಿ ಬಣದೊಂದಿಗೆ ವಿಲೀನವಾಗಿ ಉಪ ಮುಖ್ಯಮಂತ್ರಿಯಾಗಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಶಶಿಕಲಾ ಮುಖ್ಯಮಂತ್ರಿ ಹುದ್ದೆಗೆ ಏರುವಾಗಲೇ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾದ ಕಾರಣ ಜೈಲು ಸೇರುವಂತಾಗಿದೆ. ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಅವರು ಶಶಿಕಲಾ ಅವರೊಂದಿಗೆ ಗುರುತಿಸಿಕೊಂಡವರನ್ನು ಪಕ್ಷದಿಂದ ದೂರ ಮಾಡಿದ್ದಾರೆ. ಇದೇ ವೇಳೆ ಆರ್.ಕೆ. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದು ದಿನಕರನ್ ಗೆಲುವು ಕಂಡಿದ್ದಾರೆ.

ಸಾಮಾನ್ಯವಾಗಿ ಉಪ ಚುನಾವಣೆಗಳಲ್ಲಿ(ಕೆಲವೊಂದು ಹೊರತುಪಡಿಸಿ) ಆಡಳಿತ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಆರ್.ಕೆ. ನಗರ ಚುನಾವಣೆ ಫಲಿತಾಂಶ ಆಡಳಿತ ಪಕ್ಷದಲ್ಲಿನ ನಾಯಕರಿಗೆ ಪಾಠವಾದಂತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರನ್ ತಮಗೆ ‘ಅಮ್ಮ’ನ ಆಶೀರ್ವಾದವಿದೆ ಎಂದು ಹೇಳಿದ್ದಾರೆ. ಜಯಲಲಿತಾ ಅವರು ಪ್ರತಿನಿಧಿಸಿದ್ದ ಕ್ಷೇತ್ರದ ಮತದಾರರು ದಿನಕರನ್ ಅವರನ್ನು ಬೆಂಬಲಿಸಿದ್ದಾರೆ. ಚಲಾವಣೆಯಾದ ಮತಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಮತಗಳನ್ನು ದಿನಕರನ್ ಗಳಿಸಿದ್ದಾರೆ.

ಪಕ್ಷದಲ್ಲಿ ಬಣಗಳು, ಕಚ್ಚಾಟಗಳಿಗೆ ಮತದಾರರು ಬೆಂಬಲ ನೀಡಿಲ್ಲ. ಪಕ್ಷೇತರ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ. ಇದೇ ವೇಳೆ ಫಲಿತಾಂಶದಿಂದ ಆಡಳಿತಾರೂಢ ಪಕ್ಷದ ನಾಯಕರಿಗೆ ಮುಖಭಂಗವಾಗಿದೆ. ಎ.ಐ.ಎ.ಡಿ.ಎಂ.ಕೆ. ಆಡಳಿತದಲ್ಲಿರುವುದರಿಂದ ಸಹಜವಾಗಿ ಅಧಿಕಾರದಲ್ಲಿರುವವರಿಗೆ ಬೆಂಬಲ ಜಾಸ್ತಿ ಇರುತ್ತದೆ. ಇದೇ ಮುಂದೆಯೂ ಮುಂದುವರೆಯುತ್ತದೆ ಎಂಬುದನ್ನು ಹೇಳಲಾಗದು. ದಿನಕರನ್ ಕ್ಯಾಂಪ್ ಗೆ ಇನ್ನೂ ಹೆಚ್ಚಿನ ಶಾಸಕರು ಸೇರ್ಪಡೆಯಾದಲ್ಲಿ ಆಡಳಿತ ಪಕ್ಷಕ್ಕೆ ಬಹುಮತದ ಕೊರತೆಯೂ ಎದುರಾಗಬಹುದು. ದಿನಕರನ್ ಗೆಲುವು ತಮಿಳುನಾಡು ರಾಜಕೀಯದಲ್ಲಿ ಹಲವು ಬದಲಾವಣೆಗೆ ಕಾರಣವಾಗಲಿದೆ. ಅದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...