alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನು 20 ದಿನಗಳಲ್ಲಿ ಹೊರ ಬೀಳಲಿದೆ ಸುಪ್ರೀಂನ ಮತ್ತಷ್ಟು ಮಹತ್ವದ ತೀರ್ಪುಗಳು

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವಧಿ ಪೂರ್ಣಗೊಳ್ಳುತ್ತಿರುವ ಬೆನ್ನಲ್ಲೇ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪುಗಳನ್ನು ಪ್ರಕಟಿಸುತ್ತಿದ್ದು, ಇನ್ನು ಕೇವಲ 20 ದಿನಗಳಲ್ಲಿ ಐದು ಮಹಾ ತೀರ್ಪುಗಳು ಹೊರಬೀಳಲಿವೆ.

ಸಿಜೆಐ ದೀಪಕ್ ಮಿಶ್ರಾ ಅವರು ಅ.2 ರಂದು ನಿವೃತ್ತಿಯಾಗಲಿದ್ದು, ಅವರು ನಿವೃತ್ತಿಯಾಗುವ ಮೊದಲು ಹಲವು ಮಹತ್ವದ ತೀರ್ಪುಗಳು ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪುಗಳನ್ನು ಮಾತ್ರ ಕಾಯ್ದಿರಿಸಲಾಗಿದೆ.

ವಿಶಿಷ್ಠ ಗುರುತಿನ ಸಂಖ್ಯೆ ಆಧಾರ್ ವಿವಾದ, ಬಾಬರಿ ಮಸಿದಿ ವಿವಾದ, ಶಬರಿ ಮಲೈಗೆ ಮಹಿಳೆಯರ ಪ್ರವೇಶ, ಜನಪ್ರತಿನಿಧಿಗಳ ವಕೀಲ ವೃತ್ತಿ ಹಾಗೂ ವ್ಯಭಿಚಾರ ಶಿಕ್ಷೆಯಲ್ಲಿ ಲಿಂಗ ತಾರತಮ್ಯ ಕುರಿತಾದ ಮಹತ್ವದ ತೀರ್ಪುಗಳು ಹೊರ ಬೀಳುವ ನಿರೀಕ್ಷೆಯಿದೆ.

* ಆಧಾರ್ ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ 27 ಅರ್ಜಿಗಳ ವಿಚಾರಣೆಯನ್ನು ಈಗಾಗಲೇ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ ಪೂರ್ಣಗೊಳಿಸಿದೆ. ತೀರ್ಪು ಕಾಯ್ದಿರಿಸಲಾಗಿದ್ದು, ಈ ತೀರ್ಪು ದೇಶಾದ್ಯಂತ ತೀವ್ರ ಕುತೂಹಲ ಮೂಡಿದೆ.

* ಬಾಬರಿ ಮಸೀದಿ ಹಾಗೂ ಅಯೋಧ್ಯೆಯ ವಿವಾದಿತ ನಿವೇಶನವನ್ನು ಮೂರಾಗಿ ವಿಭಜಿಸಿ ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಹಂಚಿಕೆ ಮಾಡಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ಈ ಕುರಿತ ವಿಚಾರಣೆಯೂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದಲ್ಲಿದೆ.

* ಶಬರಿಮಲೈಗೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಪುರುಷ ಪ್ರಧಾನ ಸಮಾಜದ ಗ್ರಹಿಕೆಯೇ ಮಹಿಳೆಯರಿಗೆ ಪ್ರವೇಶ ನಿಷೇಧಕ್ಕೆ ಕಾರಣ ಎಂದು ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಹಿನ್ನಲೆಯಲ್ಲಿ ಪ್ರಕಟವಾಗಲಿರುವ ತೀರ್ಪು ಕೂಡ ಮಹತ್ವದ್ದಾಗಿದೆ.

* ಸಂಸದ ಅಥವಾ ಶಾಸಕರಾಗಿ ಆಯ್ಕೆಯಾಗುವ ವಕೀಲರು ತಮ್ಮ ವೃತ್ತಿ ಮುಂದುವರಿಸಬಹುದೇ ಎಂಬ ಅರ್ಜಿಯ ವಿಚಾರಣೆಯೂ ಪೂರ್ಣಗೊಂಡಿದೆ. ಸಂಸದ ಅಥವಾ ಶಾಸಕ ಜನಪ್ರತಿನಿಧಿಯೇ ಹೊರತು ಸರ್ಕಾರದ ಪೂರ್ಣಾವಧಿ ನೌಕರ ಅಲ್ಲ ಎಂದು ಸರ್ಕಾರ ವಾದ ಮಂಡಿಸಿತ್ತು. ಈ ನಿಟ್ಟಿನಲ್ಲಿ ಸುಪ್ರೀಂ ಅಂತಿಮ ತೀರ್ಪು ಕುತೂಹಲ ಕೆರಳಿಸಿದೆ.

* ಇನ್ನು ವ್ಯಭಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಲ್ಲಿ ಇರುವ ಕೆಲವು ಅಂಶಗಳನ್ನು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಪರಿಶೀಲನೆಗೆ ಒಳಪಡಿಸಿದೆ. ಸಂಹಿತೆಯಲ್ಲಿರುವ ಕೆಲವು ಅಂಶಗಳು ಮಹಿಳಾ ವಿರೋಧಿ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಎಲ್ಲಾ ಅರ್ಜಿಗಳ ವಿಚಾರಣೆಯೂ ಈಗಾಗಲೇ ಮುಗಿದಿದ್ದು, ತೀರ್ಪು ಮಾತ್ರ ಹೊರಬೀಳಲಿದೆ. ಈ ಹಿನ್ನಲೆಯಲ್ಲಿ ಇನ್ನು 20 ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡಲಿರುವ ಮಹತ್ವದ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...