alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ನಿಲ್ದಾಣಗಳಲ್ಲಿ ಆರಂಭವಾಗಲಿದೆ ಮಕ್ಕಳ ಆರೈಕೆ ಕೇಂದ್ರ

ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ರಕ್ಷಣೆಗೊಳಪಡುವ ಮಕ್ಕಳಿಗೆ ತಕ್ಷಣದಲ್ಲಿ ಆರೈಕೆ ಮಾಡಲು ಪ್ರತ್ಯೇಕ ಕೇಂದ್ರ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಇಂಥ ಕೇಂದ್ರಗಳನ್ನು ದೆಹಲಿ, ಗುವಹಾಟಿ, ದನಾಪುರ್, ಸಮಸ್ತಿಪುರ್ ಮತ್ತು ಅಹಮದಾಬಾದ್ ನಗರಗಳ ರೈಲ್ವೆ ನಿಲ್ದಾಣದ ಸಮೀಪ ಆರಂಭಿಸಲಾಗುತ್ತಿದೆ.

ಪೋಷಕರಿಂದ ತಪ್ಪಿಸಿಕೊಂಡ ಪ್ರಕರಣ, ಕಳ್ಳಸಾಗಣೆಯಿಂದ ರಕ್ಷಿಸಿದ ಪ್ರಕರಣ ಸೇರಿ ವಿವಿಧ ಕಾರಣಗಳಲ್ಲಿ ಸಿಕ್ಕಿದ ಮಕ್ಕಳನ್ನು ಈ ಕೇಂದ್ರದಲ್ಲಿ ತಕ್ಷಣ ಆರೈಕೆ ಮಾಡಬೇಕೆಂಬುದು ಉದ್ದೇಶ.

ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ರೈಲ್ವೆ ನಿಲ್ದಾಣಗಳು ಅಥವಾ ರೈಲುಗಳಲ್ಲಿ ಪೋಷಕರಿಂದ ದೂರವಾದ 35 ಸಾವಿರ ಮಕ್ಕಳು ಸಿಕ್ಕಿದ್ದಾರೆ. ದೆಹಲಿಯೊಂದರಲ್ಲೇ ಈ ವರ್ಷದ ಜನವರಿಯಿಂದ ಮೇ ವರೆಗೆ 820 ಮಕ್ಕಳನ್ನು ರಕ್ಷಿಸಲಾಗಿದೆ. ಇಂಥ ಮಕ್ಕಳನ್ನು ಗುರಿಯಾಗಿಸಿಕೊಂಡು ಆರೈಕೆ ಕೇಂದ್ರ ತೆರೆಯಲಾಗುತ್ತಿದ್ದು, ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಗೆ ಇದರ ಉಸ್ತುವಾರಿ ನೀಡಲಾಗುತ್ತಿದೆ. ಈ ಕೇಂದ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ನಾಮ ನಿರ್ದೇಶನಗೊಳ್ಳುವ ಎನ್ ಜಿ ಓಗಳಿಗೆ ವಹಿಸಲಾಗುತ್ತದೆ.

ಸುಮಾರು 2 ಸಾವಿರ ಚದರಡಿಯ ಕೇಂದ್ರಗಳಲ್ಲಿ 25 ಮಕ್ಕಳಿಗೆ ಆಶ್ರಯ ನೀಡುವ ಜತೆಗೆ ಪೌಷ್ಠಿಕಾಂಶದ ಆಹಾರ, ವೈದ್ಯಕೀಯ ನೆರವನ್ನು ನೀಡಲಾಗುತ್ತದೆ. ಈ ಕಟ್ಟಡದಲ್ಲಿ ಡಾರ್ಮೆಟರಿ, ಸ್ಟೋರ್ ರೂಂ, ಆರೈಕೆ ಕೇಂದ್ರ, ಎರಡು ಶೌಚಾಲಯ ಹೊಂದಿರುತ್ತದೆ.

ರೈಲ್ವೆ ನಿಲ್ದಾಣದ ಆವರಣದಲ್ಲೇ ಅತಿ ಸಮೀಪದಲ್ಲೇ ಈ ಕೇಂದ್ರ ಆರಂಭಿಸುವ ಉದ್ದೇಶ ಹೊಂದಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದೊಂದಿಗೆ ರೈಲ್ವೆ ಇಲಾಖೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...