alex Certify
ಕನ್ನಡ ದುನಿಯಾ       Mobile App
       

Kannada Duniya

ಅನ್ನದಾತರ ಸಂಕಷ್ಟಕ್ಕೆ ಮಿಡಿಯಿತು ಮುಂಬೈಗರ ಹೃದಯ

ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾಲ್ನಡಿಗೆಯಲ್ಲಿ 180 ಕಿ.ಮೀ. ಕ್ರಮಿಸಿ ಮುಂಬೈಗೆ ಬಂದಿದ್ದ ಸಹಸ್ರಾರು ರೈತರು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಮುಂಜಾನೆ 7 ಗಂಟೆಗೆಲ್ಲ ಅಜಾದ್ ಮೈದಾನ ಪ್ರವೇಶಿಸಿದ್ದರು. ಅಲ್ಲದೇ ಸರ್ವೀಸ್ ರಸ್ತೆಯನ್ನು ಬಳಸುವ ಮೂಲಕ ಟ್ರಾಫಿಕ್ ಗೂ ತೊಂದರೆಯುಂಟಾಗದಂತೆ ನೋಡಿಕೊಂಡಿದ್ದರು.

ರೈತರ ಹೃದಯ ವೈಶಾಲ್ಯತೆಗೆ ಮುಂಬೈ ನಿವಾಸಿಗಳೂ ಮಾರು ಹೋಗಿದ್ದಾರೆ. ಅನ್ನದಾತರ ಬೇಡಿಕೆ ಈಡೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಲ್ಲದೇ ಹಲವೆಡೆ ಮೆರವಣಿಗೆ ತೆರಳುತ್ತಿದ್ದ ರೈತರ ಮೇಲೆ ಹೂ ಮಳೆಗರೆದು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಕಾಲ್ನಡಿಗೆಯಲ್ಲಿ ಬಂದಿದ್ದ ಕೆಲ ರೈತರು, ರೈತ ಮಹಿಳೆಯರು ಪಾದರಕ್ಷೆಯನ್ನೂ ಧರಿಸದ ಕಾರಣ ಸುಡು ಬಿಸಿಲಿಗೆ ಗಾಯವಾದ ಚಿತ್ರಗಳನ್ನು ನೋಡಿ ಮರುಗಿದ ಮುಂಬೈಗರು ತಮ್ಮ ಕೈಲಾದ ನೆರವು ನೀಡಿದ್ದಾರೆ. ರೈತರ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪ್ರಾಚಿ ಸಾಳ್ವೆ ಎಂಬ ಪತ್ರಕರ್ತೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಲ್ಲದೇ ಪಾದರಕ್ಷೆ, ಶೂ ನೀಡುವಂತೆ ಮನವಿ ಮಾಡಿದ್ದರು.

ಕೆಲ ಕ್ಷಣಗಳಲ್ಲೇ ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಪ್ರಾಚಿ ಸಾಳ್ವೆಯವರ ಕಛೇರಿ ಬಳಿ ಪಾದರಕ್ಷೆಗಳ ದೊಡ್ಡ ರಾಶಿಯೇ ಸಂಗ್ರಹವಾಗಿತ್ತು. ಇವುಗಳನ್ನು ಬರಿಗಾಲಿನಲ್ಲಿದ್ದ ರೈತರಿಗೆ ನೀಡಲಾಗಿದೆ. ಮುಂಬೈನ ಬಹಳಷ್ಟು ಮಂದಿ ತಾವು ಹಣ ಸಹಾಯ ನೀಡುವುದಾಗಿ ತಿಳಿಸಿದ್ದು, ಆದರೆ ಇದನ್ನು ಒಪ್ಪದ ಸಾಳ್ವೆ ಪಾದರಕ್ಷೆಗಳನ್ನು ಕಳಿಸಿಕೊಡುವಂತೆ ಮನವಿ ಮಾಡಿದ್ದರು. ಮುಂಬೈ ಡಬ್ಬಾವಾಲಾಗಳು ಹಸಿದ ರೈತರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ. ರೈತರ ಬೃಹತ್ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಈಗ ಸಾಲ ಮನ್ನಾ ಸೇರಿದಂತೆ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಿದ್ದು, ಪ್ರತಿಭಟನೆ ಅಂತ್ಯಗೊಳಿಸಿ ರೈತರು ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...