alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಜೈಲಿನಿಂದ ಭಾರತೀಯ ಟೆಕ್ಕಿಗೆ ಕೊನೆಗೂ ಮುಕ್ತಿ?

ಅಕ್ರಮವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ ಆರೋಪದ ಮೇಲೆ 2012 ರಿಂದ ಪಾಕಿಸ್ತಾನದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಭಾರತೀಯ ಟೆಕ್ಕಿಗೆ ಕೊನೆಗೂ ಪಾಕಿಸ್ತಾನ ಬಿಡುಗಡೆಯ ಭಾಗ್ಯ ನೀಡಿದೆ. ಸೂಕ್ತ ದಾಖಲಾತಿಗಳಿಲ್ಲದೆ ಆರು ವರ್ಷಗಳ ಹಿಂದೆ ತನ್ನ ನೆಲಕ್ಕೆ ಕಾಲಿಟ್ಟ ಆರೋಪದ ಮೇಲೆ ಪಾಕಿಸ್ತಾನ, ಭಾರತೀಯ ಟೆಕ್ಕಿ ಅನ್ಸಾರಿಯನ್ನ ಆರು ವರ್ಷಗಳ ಹಿಂದೆ ಬಂಧಿಸಿತ್ತು.

ತಪ್ಪು ದಾಖಲೆಗಳನ್ನ ಬಳಸಿ ನವೆಂಬರ್ 12, 2012 ರಂದು ಮುಂಬೈ ಮೂಲದ ಅನ್ಸಾರಿ ಎಂಬ ಟೆಕ್ಕಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ. ಎರಡು ದಿನಗಳ ನಂತರದಲ್ಲಿ ಅನ್ಸಾರಿಯನ್ನ ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧಾರದಲ್ಲಿ ಬಂಧಿಸಲಾಗಿತ್ತು. ಬಳಿಕ ಮಿಲಿಟರಿ ಕೋರ್ಟ್ ನಲ್ಲಿ ನಡೆದ ರಹಸ್ಯ ವಿಚಾರಣೆಯಲ್ಲಿ ಅನ್ಸಾರಿಯನ್ನ ತಪ್ಪಿತಸ್ಥ ಎಂದು ನಿರ್ಧರಿಸಲಾಗಿತ್ತು. ಬಂಧಿತ ಅನ್ಸಾರಿ ಭಾರತದ ಗೂಢಚಾರಿ ಅನ್ನೋ ಆರೋಪವನ್ನು ಮಾಡಲಾಗಿತ್ತು. ಭಾರತದ ಹೈಕಮೀಷನರ್ ಕಚೇರಿಗೂ ಈ ವಿಚಾರವನ್ನು ತಿಳಿಸಲಾಗಿತ್ತು.

ಭಾರತದ ವಕೀಲರು ಕೂಡ ಅನ್ಸಾರಿ ಪರವಾಗಿ ವಕಾಲತ್ತು ವಹಿಸಿ ಪಾಕಿಸ್ತಾನದ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಈ ಹಂತದಲ್ಲಿ ನಡೆದ ಅನೇಕ ಕಾನೂನಾತ್ಮಕ ಬೆಳವಣಿಗೆಗಳಿಂದ ಅನ್ಸಾರಿ ಪಾಕಿಸ್ತಾನದ ಜೈಲಿನಲ್ಲೇ ಅಪರಾಧಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ. 2015ರಲ್ಲಿ ಮೂರು ವರ್ಷಗಳ ಕಾಲ ಅನ್ಸಾರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದಾದ ಬಳಿಕ ಅನೇಕ ಬಾರಿ ಅನ್ಸಾರಿ ಬಿಡುಗಡೆಗೆ ಮನವಿ ಅರ್ಜಿಯನ್ನು ಭಾರತ ಸಲ್ಲಿಸಿದರೂ ಪಾಕಿಸ್ತಾನದ ನ್ಯಾಯಾಲಯ ಮನವಿಯನ್ನು ಪುರಸ್ಕರಿಸಿರಲಿಲ್ಲ. ಅನ್ಸಾರಿ ತಾಯಿ ಫೌಜಿಯಾ ಮಗನ ಬಿಡುಗಡೆಗೆ ಭಾರತ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಅಲ್ಲದೇ ತನ್ನ ಮಗ ಆರೋಪ ಮುಕ್ತನಾಗಿ ವಾಪಸ್ಸಾಗ್ತಾನೆ ಅಂತ ನಂಬಿದ್ದರು. ಅಷ್ಟೇ ಅಲ್ಲ ಪಾಕಿಸ್ತಾನದ ಜೈಲಿನಲ್ಲಿರುವ ತಮ್ಮ ಮಗನನ್ನ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಪ್ರಧಾನಿಗೆ ಪತ್ರ ಬರೆದಿದ್ದರು.

ಇತ್ತೀಚೆಗಷ್ಟೆ ಅನ್ಸಾರಿ ತಾಯಿ ಫೌಜಿಯಾ ಪ್ರೊಫೆಸರ್ ವೃತ್ತಿಯಿಂದ ನಿವೃತ್ತರಾಗಿದ್ದು ಅಪಘಾತದಿಂದಾಗಿ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಭಾರತೀಯ ಗೃಹ ಸಚಿವಾಲಯ ಮತ್ತು ಪಾಕಿಸ್ತಾನದ ಸರ್ಕಾರದ ಮಧ್ಯೆ ನಡೆದಿರುವ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿದಿರುವ ಸೂಚನೆ ಸಿಕ್ಕಿದೆ. 2018ರ ಡಿಸೆಂಬರ್ ನಲ್ಲಿ ಅನ್ಸಾರಿ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಧ್ಯಸ್ಥಿಕೆಯಿಂದಾಗಿ ಅನ್ಸಾರಿಗೆ ಬಿಡುಗಡೆ ಭಾಗ್ಯ ದೊರೆಯಲಿದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...