alex Certify
ಕನ್ನಡ ದುನಿಯಾ       Mobile App
       

Kannada Duniya

‘ಕರುಣಾನಿಧಿ’ಯವರ ಕುರಿತು ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ನಟ ಚರಣ್ ರಾಜ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ನಿಧನದಿಂದಾಗಿ ತಮಿಳುನಾಡಿನಾದ್ಯಂತ ಶೋಕದ ಛಾಯೆ ಆವರಿಸಿದೆ. ತಮಿಳುನಾಡು ಸರ್ಕಾರ ಇಂದು ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಕರುಣಾನಿಧಿಯವರ ಗೌರವಾರ್ಥ ಏಳು ದಿನಗಳ ಕಾಲ ಶೋಕಾಚರಣೆಗೆ ಸೂಚಿಸಿದೆ.

ಕರುಣಾನಿಧಿಯವರ ಅಂತಿಮ ದರ್ಶನಕ್ಕಾಗಿ ಚೆನ್ನೈನ ರಾಜಾಜಿ ಹಾಲ್ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು ಪ್ರಧಾನಿ ನರೇಂದ್ರಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ತಮ್ಮ ಅಂತಿಮ ನಮನ ಸಲ್ಲಿಸಿದ್ದು, ಇದರ ಮಧ್ಯೆ ಖ್ಯಾತ ನಟ ಚರಣ್ ರಾಜ್, ಕರುಣಾನಿಧಿಯವರ ಕುರಿತು ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಗೊಳಿಸಿದ್ದಾರೆ.

ಕರ್ನಾಟಕದ ಚರಣ್ ರಾಜ್, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಅವರು ನಾಯಕ ನಟರಾಗಿ ನಟಿಸಿದ ಮೊದಲ ಚಿತ್ರಕ್ಕೆ ಕರುಣಾನಿಧಿಯವರೇ ಸಂಭಾಷಣೆ ಬರೆದಿದ್ದರೆಂಬ ಅಂಶವನ್ನು ಚರಣ್ ರಾಜ್ ಸ್ಮರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಚೆನ್ನೈನಲ್ಲಿ ತಮಗೆ ವಾಸಿಸಲು ಸ್ವಂತ ಮನೆ ಇರದ ಕಾರಣ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯವರನ್ನು ಭೇಟಿಯಾದ ವೇಳೆ ತಮ್ಮ ಪುತ್ರ ಅಳಗಿರಿ ಅವರಿಗೆ ಸೇರಿದ ದೊಡ್ಡ ಮನೆಯೊಂದನ್ನು ನೀಡಿದ್ದಾಗಿ ಚರಣ್ ರಾಜ್ ತಿಳಿಸಿದ್ದಾರೆ.

ಈ ಮನೆಗೆ ಹಣ ನೀಡಲು ಹೋದರೂ ಅದನ್ನು ನಿರಾಕರಿಸಿದ ಕರುಣಾನಿಧಿಯವರು, ಬಳಿಕ ಆ ಮನೆಯನ್ನು ತಮ್ಮ ಹೆಸರಿಗೆ ಮಾಡಿದ್ದ ಕಾಗದ ಪತ್ರವನ್ನು ಪೋಸ್ಟ್ ಮೂಲಕ ಕಳುಹಿಸಿದ್ದರೆಂದು ಚರಣ್ ರಾಜ್ ಹೇಳಿದ್ದಾರೆ. ಇದೇ ಮನೆಯಲ್ಲಿ ನನ್ನ ಮೂವರು ಮಕ್ಕಳು ಹುಟ್ಟಿದ್ದು ಸುಮಾರು 25 ವರ್ಷಗಳ ಕಾಲ ಆ ಮನೆಯಲ್ಲಿ ವಾಸವಾಗಿದ್ದೆ ಎಂದು ಚರಣ್ ರಾಜ್ ಸ್ಮರಿಸಿಕೊಂಡಿದ್ದಾರೆ.

ಕರುಣಾನಿಧಿಯವರ ಸಾವು ವೈಯಕ್ತಿಕವಾಗಿ ನನಗೆ ಅಪಾರ ನೋವು ತಂದಿದೆ ಎಂದು ಹೇಳಿರುವ ಚರಣ್ ರಾಜ್, ಸದ್ಯ ಶೂಟಿಂಗ್ ಕಾರಣಕ್ಕಾಗಿ ಚೆನ್ನೈನಿಂದ ಹೊರಗಿರುವ ಕಾರಣ ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲಾಗುತ್ತಿಲ್ಲ. ಚೆನ್ನೈಗೆ ಹೋದ ತಕ್ಷಣವೇ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...