alex Certify
ಕನ್ನಡ ದುನಿಯಾ       Mobile App
       

Kannada Duniya

ಬದುಕಿನ ಪಯಣ ಅಂತ್ಯಗೊಳಿಸಿದ ಜಯಲಲಿತಾ ನಡೆದು ಬಂದ ಹಾದಿ

All India Anna Dravida Munnetra Kazhagam (AIADMK) leader J. Jayalalithaa waves to her party supporters while standing on the balcony of her residence in Chennai on May 13, 2011,ಕಳೆದ 74 ದಿನಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ದೇಶ- ವಿದೇಶಗಳ ಖ್ಯಾತ ವೈದ್ಯರ ಅವಿರತ ಯತ್ನ, ಅಭಿಮಾನಿಗಳ ನಿರಂತರ ಪ್ರಾರ್ಥನೆ, ಹಾರೈಕೆಗಳು ಬಳಿಕವೂ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು ಚಿತ್ರರಂಗದಲ್ಲಿ ನಾಯಕಿಯಾಗಿ ಕಂಗೊಳಿಸಿ ಬಳಿಕ ಆರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಹಲವು ಜನಪ್ರಿಯ ‘ಅಮ್ಮಾ’ ಯೋಜನೆಗಳು ಅವರನ್ನು ಜನಮಾನಸದಲ್ಲಿ ಚಿರಸ್ಥಾಯಿಯನ್ನಾಗಿಸಿವೆ. ಜಯಲಲಿತಾ ನಡೆದು ಬಂದ ಹಾದಿಯ ಒಂದು ಅವಲೋಕನ ಇಲ್ಲಿದೆ.

ಜಯರಾಮ್ ಹಾಗೂ ಸಂಧ್ಯಾ ದಂಪತಿಗಳ ಪುತ್ರಿಯಾಗಿ 1948 ಫೆಬ್ರವರಿ 24 ರಂದು ಮೈಸೂರಿನ ಲಕ್ಷ್ಮೀಪುರಂನಲ್ಲಿ ಜನಿಸಿದ ಜಯಲಲಿತಾರವರು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಜಯಲಲಿತಾ ಅವರಿಗೆ ಎರಡು ವರ್ಷವಾಗಿದ್ದಾಗಲೇ ತಂದೆ ಮೃತಪಟ್ಟಿದ್ದು, ಜೀವನ ನಿರ್ವಹಣೆಗಾಗಿ ತಾಯಿ ಸಂಧ್ಯಾ ತಮಿಳು ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಹೀಗಾಗಿ ಜಯಲಲಿತಾರನ್ನು ಚೆನ್ನೈಗೆ ಕರೆಸಿಕೊಂಡ ತಾಯಿ ಸಂಧ್ಯಾ, ಅಲ್ಲಿನ ಚರ್ಚ್ ಪಾರ್ಕಿನಲ್ಲಿರುವ ಶಾಲೆಗೆ ಸೇರಿಸಿದ್ದರು. ಜಯಲಲಿತಾ ಅವರಿಗೆ 15 ವರ್ಷವಾಗಿದ್ದಾಗಲೇ ಚಿತ್ರರಂಗವನ್ನು ಪ್ರವೇಶಿಸಿದ್ದು, ಅವರ ಪ್ರಥಮ ಚಿತ್ರ ಕನ್ನಡದ ‘ಚಿನ್ನದ ಗೊಂಬೆ’ ಎಂಬುದು ಗಮನಾರ್ಹ.

ತಮಿಳು ಚಿತ್ರರಂಗದ ಅನಭಿಷಿಕ್ತ ದೊರೆಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರ ಸಂಪರ್ಕಕ್ಕೆ ಬಂದ ಮೇಲೆ ಜಯಲಲಿತಾರ ಅದೃಷ್ಟ ಬದಲಾಯಿತು. ಈ ಜೋಡಿ ತಮಿಳು ಚಿತ್ರ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 28 ಚಿತ್ರಗಳಲ್ಲಿ ಇವರಿಬ್ಬರು ನಾಯಕ- ನಾಯಕಿಯಾಗಿದ್ದರೆಂದರೇ ಈ ಜೋಡಿಯ ಜನಪ್ರಿಯತೆಯನ್ನು ಊಹಿಸಬಹುದಾಗಿದೆ.

ಎಂಜಿಆರ್ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ ಬಳಿಕ 1982 ರಲ್ಲಿ ಜಯಲಲಿತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಆಗ ಜಯಲಲಿತಾರಿಗೆ 34 ವರ್ಷ ವಯಸ್ಸಾಗಿತ್ತು. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಜಯಲಲಿತಾರನ್ನು ಈ ಕಾರಣಕ್ಕಾಗಿಯೇ ಎಂಜಿಆರ್, ಎಐಎಡಿಎಂಕೆ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದರು.

ಎಂಜಿಆರ್ ನಿಧನದ ಬಳಿಕ ಎಐಎಡಿಎಂಕೆ ಪಕ್ಷದ ಮೇಲೆ ಹಿಡಿತ ಸಾಧಿಸಿದ ಜಯಲಲಿತಾ 1991 ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಮಧ್ಯೆ ರಾಜಕೀಯ ಜೀವನದಲ್ಲಿ ಹಲವು ಏಳುಬೀಳುಗಳನ್ನು ಜಯಲಲಿತಾರವರು ಕಂಡಿದ್ದು, ಒಟ್ಟು ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.

ಅನಾರೋಗ್ಯದ ಕಾರಣ ಸೆಪ್ಟೆಂಬರ್ 22 ರಿಂದ ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ, ಗುಣಮುಖರಾಗಿ ಇನ್ನೇನೂ ಮನೆಗೆ ತೆರಳಿ ಎಂದಿನಂತೆ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ಎಲ್ಲರೂ ಸಂತಸದಿಂದಿರುವಾಗಲೇ ಭಾನುವಾರ ಸಂಜೆ ಹೃದಯಾಘಾತವಾದ ಸುದ್ದಿ ಹೊರ ಬಿದ್ದ ಬಳಿಕ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಅವರನ್ನು ಉಳಿಸಿಕೊಳ್ಳಲು ತಜ್ಞ ವೈದ್ಯರ ತಂಡ ನಿರಂತರ ಯತ್ನ ನಡೆಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11-30 ಕ್ಕೆ ಜಯಲಲಿತಾ ನಿಧನರಾದರೆಂದು ಘೋಷಿಸಲಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...