alex Certify
ಕನ್ನಡ ದುನಿಯಾ       Mobile App
       

Kannada Duniya

62 ಜವಾನ ಹುದ್ದೆಗೆ ಬಂದ್ವು ಬರೋಬ್ಬರಿ 93 ಸಾವಿರ ಅರ್ಜಿ…!

ಲಖನೌ: 62 ಹುದ್ದೆಗಳಿರುವ ಸರಕಾರಿ ಕೆಲಸಕ್ಕೆ ಅಬ್ಬಾ ಎಂದರೆ ಎಷ್ಟು ಅರ್ಜಿ ಬರಬಹುದು? ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ತಾಂತ್ರಿಕ ವಿಭಾಗದ ಜವಾನ ಹುದ್ದೆಗೆ ಬರೋಬ್ಬರಿ 93 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ.

ಅಷ್ಟು ಮಾತ್ರ ಅಲ್ಲ, ಕನಿಷ್ಠ ವಿದ್ಯಾರ್ಹತೆ ಸಾಕಾಗಿರುವ ಈ ಹುದ್ದೆಗೆ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಮಾಡಿದವರೂ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಅರ್ಜಿಗಳನ್ನು ವಿಲೇವಾರಿ ಮಾಡುವುದು ತಲೆನೋವಾಗಿ ಪರಿಣಮಿಸಿದೆ.

ಈ ಹುದ್ದೆಗೆ ಕನಿಷ್ಠ 5ನೇ ತರಗತಿ ಹಾಗೂ ಸೈಕಲ್‌ ಚಲಾಯಿಸಲು ಬಲ್ಲವರು ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿತ್ತು. ಆದರೆ ಸುಮಾರು 3 ಸಾವಿರ ಮಂದಿ ಸಂಶೋಧನಾ ಪದವಿ ಪಡೆದವರು, 20 ಸಾವಿರ ಸ್ನಾತಕೋತ್ತರ ಪದವೀಧರರು ಹಾಗೂ 50 ಸಾವಿರ ಮಂದಿ ಪದವೀಧರರು ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಇಂತಹ ವಿಪರ್ಯಾಸ ಇದೇ ಮೊದಲಲ್ಲ. ಈ ಹಿಂದೆ ಕಸಗುಡಿಸುವ ಕೆಲಸಕ್ಕೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬ್ಯುಸಿನೆಸ್‌ ಸ್ಕೂಲ್‌ಗಳ ಪದವೀಧರರು ಅರ್ಜಿ ಸಲ್ಲಿಸಿದ್ದರು. ಇಲಾಖೆ ಟೆಲಿಕಾಂ ವಿಭಾಗದಲ್ಲಿ ಸಾಕಷ್ಟು ಜನ ತಮ್ಮ ವಿದ್ಯಾರ್ಹತೆಗಿಂತ ಕಡಿಮೆ ಮಟ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಪ್ರಮೋದ್‌ ತಿವಾರಿ ಹೇಳಿದ್ದಾರೆ.

2015ರಲ್ಲಿ ಲಖನೌನಲ್ಲಿ ರಾಜ್ಯ ಕಾರ್ಯದರ್ಶಿ ವಿಭಾಗದಲ್ಲಿ ಖಾಲಿ ಇದ್ದ 368 ಹುದ್ದೆಗಳಿಗೆ 23 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 250 ಮಂದಿ ಸಂಶೋಧನಾ ವಿದ್ಯಾರ್ಥಿಗಳಾಗಿದ್ದರು. 2015-16ರ ನಿರುದ್ಯೋಗಿಗಳ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ. 7.4 ನಿರುದ್ಯೋಗ ಪ್ರಮಾಣ ಇದ್ದು, ಇವು ರಾಷ್ಟ್ರೀಯ ನಿರುದ್ಯೋಗ ಪ್ರಮಾಣ (ಶೇ.5)ಕ್ಕಿಂತ ಹೆಚ್ಚಾಗಿದೆ.

ಹುದ್ದೆಯಲ್ಲಿ ತಾಂತ್ರಿಕ ವಿಚಾರಗಳು ಹೆಚ್ಚಿರುತ್ತವೆ. ಹೆಚ್ಚು ವಿದ್ಯಾರ್ಹತೆ ಇರುವವರನ್ನು ನೇಮಕ ಮಾಡಿಕೊಂಡರೆ, ಕ್ರಮೇಣ ಅವರಿಗೆ ಬಡ್ತಿ ನೀಡಿ, ವಿದ್ಯಾರ್ಹತೆಗೆ ತಕ್ಕ ಹುದ್ದೆ ಲಭಿಸಲಿದೆ. ಇಲಾಖೆಗೆ ಪಿಎಚ್‌ಡಿ, ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇನ್‌ಸ್ಪೆಕ್ಟರ್‌ಗಳೂ ಇದ್ದಾರೆ. ಇಲಾಖೆಯಲ್ಲಿ ಗುಣಮಟ್ಟ, ವೃತ್ತಿಪರತೆ ಹೆಚ್ಚು ಬೆಳೆಯುತ್ತದೆ ಎಂದು ಪ್ರಮೋದ್‌ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿರುವ 68 ಸಾವಿರ ಖಾಲಿ ಹುದ್ದೆಗಳಿಗೆ ನೇಮಕ ಮಾಡಲು 40 ಸಾವಿರ ಮಂದಿ ಮಾತ್ರ ಅರ್ಹರಾಗಿದ್ದಾರೆ. ನಮ್ಮಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿ, ಗುಣಮಟ್ಟದ ಶಿಕ್ಷಣ ನೀಡಲು ಶಕ್ತ ಅಭ್ಯರ್ಥಿಗಳ ಕೊರತೆ ಇದೆ ಎಂದು ಇತ್ತೀಚೆಗೆ ಸಿಎಂ ಯೋಗಿ ಆದಿತ್ಯನಾಥ್‌ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...