
ನವದೆಹಲಿ: ಕೆಲವು ದಿನಗಳಿಂದ ಅನೇಕ ಕಾರಣಗಳಿಂದಾಗಿ ಸಂಸತ್ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಆದರೆ, ಸಂಸದರಿಗೆ ವೇತನ ಏರಿಕೆ ಮಾಡುವ ಹಣಕಾಸು ಮಸೂದೆಗೆ ಮಾತ್ರ ಯಾರೂ ತುಟಿ ಬಿಚ್ಚಿಲ್ಲ. ಹೌದು, ಸಂಸದರ ವೇತನ ಹೆಚ್ಚಳ ಮಸೂದೆಗೆ ಯಾವುದೇ ಚರ್ಚೆ ಇಲ್ಲದೇ ಒಪ್ಪಿಗೆ ನೀಡಲಾಗಿದೆ.
ಲೋಕಸಭೆ ಅಧಿವೇಶನದಲ್ಲಿ ವಿವಿಧ ಕಾರಣಗಳಿಂದ ಆರೋಪ, ಪ್ರತ್ಯಾರೋಪಗಳು ನಡೆದೇ ಇವೆ. ಆದರೆ, ವೇತನ ಹೆಚ್ಚಳದ ಪ್ರಸ್ತಾವನೆಗೆ ಮಾತಿಲ್ಲದೇ ಒಪ್ಪಿಗೆ ದೊರೆತಿದೆ. ಸಂಸದರ ವೇತನ 50,000 ರೂ.ನಿಂದ 1 ಲಕ್ಷ ರೂ.ಗೆ ಏರಿಕೆಯಾಗಿದೆ.
ಕ್ಷೇತ್ರ ಭತ್ಯೆಯನ್ನು ಕೂಡ ಏರಿಕೆ ಮಾಡಲಾಗಿದೆ. 45,000 ರೂ.ನಿಂದ 70,000 ರೂ.ಗೆ ಕ್ಷೇತ್ರ ಭತ್ಯೆ ಏರಿಕೆಯಾಗಿದೆ. ಕಚೇರಿ ವೆಚ್ಚವನ್ನು 45,000 ರೂ.ನಿಂದ 60,000 ರೂ.ಗೆ ಏರಿಕೆ ಮಾಡಲಾಗಿದೆ. ಪೀಠೋಪಕರಣ ಖರೀದಿ ಮೊತ್ತವನ್ನು 75,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಸಂಸತ್ ನ ಮಾಜಿ ಸದಸ್ಯರ ಪಿಂಚಣಿಯನ್ನು 20,000 ರೂ.ನಿಂದ 25,000 ರೂ.ಗೆ ಏರಿಕೆ ಮಾಡಲಾಗಿದೆ. ಹೆಚ್ಚುವರಿ ಪಿಂಚಣಿಯನ್ನು 1500 ರೂ.ನಿಂದ 2000 ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ರಾಷ್ಟ್ರಪತಿ ವೇತನ ಕೂಡ ಏರಿಕೆಯಾಗಿದೆ. ರಾಷ್ಟ್ರಪತಿಗಳ ಮಾಸಿಕ ವೇತನ 1.50 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆಯಾಗಿದೆ. ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ದೊರೆತಿದೆ. ರಾಜ್ಯಸಭೆಯಲ್ಲಿ ಒಪ್ಪಿಗೆ ಬೇಕಿದೆ.